ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಬದುಕಿಗೆ ಅಗತ್ಯವಾದ ಅನೇಕ ಕೌಶಲ್ಯ ಕಲಿಯಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಳವಾರ ಗ್ರಾಮದ ಹಿರಿಯ ಮುಖಂಡ ಡಿ.ಎಂ.ಅಣ್ಣೇಗೌಡ ಹೇಳಿದರು.
ಅವರು ಸೋಮವಾರ ತಾಲೂಕಿನ ತಳವಾರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾರದ ಪೂಜೆ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸಂತೆ ಎಂದರೆ ಕೇವಲ ಖರೀದಿ ಹಾಗೂ ಮಾರಾಟವಲ್ಲ. ಇದು ಮಕ್ಕಳಲ್ಲಿ ವ್ಯವಹಾರ ಜ್ಞಾನ, ಹಣದ ಮೌಲ್ಯ, ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಒಂದು ವೇದಿಕೆ. ಸ್ವತಃ ವಸ್ತುಗಳನ್ನು ತಯಾರಿಸಿ, ಅವುಗಳಿಗೆ ಬೆಲೆ ನಿಗದಿ ಮಾಡಿ, ಗ್ರಾಹಕರಿಗೆ ಮಾರಾಟ ಮಾಡುವುದರಿಂದ, ನೈಜ ಜೀವನದ ಅನುಭವ ಪಡೆಯುತ್ತಾರೆಂದು ಹೇಳಿದರು.

ಶಿಕ್ಷಕ ಮೂರ್ತಿ ಮಾತನಾಡಿ, ಮಕ್ಕಳ ಸಂತೆ ಕಾರ್ಯಕ್ರಮ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸುತ್ತದೆ. ಕೆಲವರು ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥ ತಯಾರಿಸುವುದರಿಂದ ಸ್ವಾವಲಂಬನೆಯ ಅರಿವು ಮೂಡುತ್ತದೆ. ಅಲ್ಲದೇ ಮಕ್ಕಳಲ್ಲಿ ಸಹಕಾರ ಮನೋಭಾವ ಬೆಳೆಯುತ್ತದೆ. ಹೊಣೆಗಾರಿಕೆ ಹಂಚಿಕೊಳ್ಳುವುದು ಹಾಗೂ ತಂಡವಾಗಿ ಯಶಸ್ಸು ಸಾಧಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಸಂತೆಯಲ್ಲಿ ಹಣ್ಣು. ತರಕಾರಿ. ಪೆನ್ನು. ಪುಸ್ತಕ. ಕಾಳುಗಳು. ಮುಂತಾದವುಗಳನ್ನು ಮಾರಾಟ ಮಾಡಲಾಯಿತು. ಗ್ರಾಮಸ್ಥರಾದ ಕಳಸೆಗೌಡ, ನವೀನ್, ಪ್ರಸನ್ನ, ಸಂತೋಷ್, ಎಸ್‍ಡಿಎಂಸಿ ಅಧ್ಯಕ್ಷ ಅಣ್ಣಪ್ಪ, ಸದಸ್ಯರಾದ ಸುರೇಶ್, ದರ್ಮೇಶ್, ಗಂಗಯ್ಯ, ಜಗಣ್ಣ, ಶಿಕ್ಷಕಿ ಶ್ಯೆಲಾರಾಧ್ಯ ಮತ್ತಿತರರಿದ್ದರು.



