ಚಿಕ್ಕಮಗಳೂರು ಪ್ರತಿಭೆ ವೈಷ್ಣವಿ ಎನ್.ರಾವ್ ನಿಜಕ್ಕೂ ಸಹಜಾಭಿನಯ ಚತುರೆ. ಕಿರುಚಿತ್ರಗಳಲ್ಲಿ ಹಿರಿಯ ಅನುಭವಿಗಳಂತೆ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿ ನಗರದ ಕೆಂಪನಹಳ್ಳಿಯವರಿಗೆ ಅಪಾರ ಹೆಮ್ಮೆಯ ವಿಚಾರ ಎಂದು ಚಿಂತಕಿ ರುಕ್ಮಿಣಿಯಮ್ಮ ತಿಳಿಸಿದರು.
ಚಿಕ್ಕಮಗಳೂರು ನಗರದ ಕಲ್ಕಟ್ಟೆ ಪುಸ್ತಕದ ಮನೆಯವರು ಇತ್ತೀಚೆಗೆ ಏರ್ಪಡಿಸಿದ್ದ `ಗಾಂಧಿ ಬಜಾûರ್’ ಕಿರುಚಿತ್ರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಸಾಲಿನ ಕತೆಯನ್ನು ಒಂಭತ್ತೂವರೆ ನಿಮಿಷದಲ್ಲಿ ನಮ್ಮೆದುರೇ ನಡೆಯುತ್ತಿರುವಂತೆ ನಿರ್ದೇಶಕ ನವನೀತ್ ರೆಡ್ಡಿ ಕಟ್ಟಿಕೊಟ್ಟಿದ್ದಾರೆ. ನಟ ಗೌತಮ್ ಸಹ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಗಂಭೀರ ಕತೆಯಲ್ಲಿ ಹಾಸ್ಯವೂ ಹಾಸು ಹೊಕ್ಕಾಗಿರುವುದು ಕಚಗುಳಿಯಿಡುವ ಅನುಭವ ನೀಡುತ್ತದೆ ಎಂದರು.
ಚಿಂತಕಿ ಕೃಷ್ಣವೇಣಿ ಮಾತನಾಡಿ, ಬೆಂಗಳೂರಿನ ಬ್ಯುಸಿ ಬದುಕಿನ ನಡುವೆ ನಡೆವ ಗಾಂಧಿ ಬಜಾûರ್‍ನಲ್ಲಿ ನಡೆವ ಸ್ನೇಹ, ಬಾಂಧವ್ಯ ಸಾರುವ ಘಟನೆಯೊಂದನ್ನು ನವಿರಾಗಿ ನಿರೂಪಿಸಿರುವ ಶೈಲಿ ನಿಜಕ್ಕೂ ಮನಸ್ಸು ತಟ್ಟುತ್ತದೆ ಎಂದರು.

ಇನ್ನೋರ್ವ ಚಿಂತಕಿ ಶೈಲ ಅವರು ಮಾತನಾಡಿ, ನಮ್ಮೆದುರು ಬೆಳೆಯುತ್ತಿರುವ ನಮ್ಮೂರ ಪ್ರತಿಭೆ ವೈಷ್ಣವಿಯನ್ನು ನಮ್ಮ ಮನೆಯ ಟಿ.ವಿ. ಪರದೆಸಯಲ್ಲಿ ನೋಡುವುದೇ ಸಂತೋಷದ ಸಂಗತಿ. ವೈಷ್ಣವಿ ಚಿತ್ರರಂಗಕ್ಕೂ ನಾಯಕಿಯಾಗಿ ಕಾಲಿಡುವಂತಾಗಲಿ ಎಂದು ಶುಭ ಹಾರೈಸಿದರು.
ಜಿ 3 ಮತ್ತು ಲೈಫ್ ಪೇಜಸ್ ಅರ್ಪಿಸಿರುವ ಗಾಂಧಿ ಬಜಾûರ್ ಕಿರುಚಿತ್ರದಲ್ಲಿ ತೇಜಸ್ ಜಿ.ಕೆ.ಯವರ ನೇತೃತ್ವದಲ್ಲಿ ಛಾಯಾಗ್ರಹಣವಿದ್ದು, ಗೌತಮ್ ಚಂದ್ರ ಅವರ ಸಂಕಲನ, ಶಿವ ಸಮರ್ಥ್ ಅವರ ಸಂಗೀತ, ಸಾಹಿತ್ಯವಿದೆ. ಮಾನವ್ ಪಿ. ಎಂ., ಸಂಭ್ರಮ್ ಕೆ ಗೌಡ, ಚಿನ್ಮಯ್ ಆನಂದ್ ಮೊದಲಾದವರ ಸಹಕಾರದಿಂದ ನವನೀತ್ ರೆಡ್ಡಿ ಅವರು ಒಂದು ಸೊಗಸಾದ ಕಿರುಚಿತ್ರ ನಿರ್ದೇಶಿಸಿದ್ದಾರೆ ಎಂದು ಕಲ್ಕಟ್ಟೆ ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾನಾಗರಾಜರಾವ್ ತಿಳಿಸಿದರು. ಶಿಕ್ಷಕಿ ಶೃತಿ ರಮೇಶ್, ಬಾಲ ಕಲಾವಿದೆ ಮೈತ್ರಿ ಉಪಸ್ಥಿತರಿದ್ದರು.
ಚಿನ್ಮಯಿ ರಮೇಶ್ ಸ್ವಾಗತಿಸಿದರು. ನಾಗರಾಜರಾವ್ ಕಲ್ಕಟ್ಟೆ ವಂದಿಸಿದರು.



