suddi5 (6)

 

 

ಪ್ರತಿಯೊಬ್ಬ ಗ್ರಾಹಕನಿಗೂ ವಸ್ತುವಿನ ಸುರಕ್ಷತೆ, ಗುಣಮಟ್ಟದ ಮಾಹಿತಿ ಮತ್ತು ತನಗೆ ಬೇಕಾದ ವಸ್ತುವನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕಿದೆ. ಈ ಹಕ್ಕುಗಳ ಉಲ್ಲಂಘನೆಯಾದಾಗ ಗ್ರಾಹಕರು ಮೌನವಾಗಿರಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚನ್ನಕೇಶವ ತಿಳಿಸಿದರು.

ಚಿಕ್ಕಮಗಳೂರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ಮಾರುಕಟ್ಟೆಯಲ್ಲಿ ಕೇವಲ ವಸ್ತುಗಳನ್ನು ಖರೀದಿಸುವವರಲ್ಲ, ಬದಲಾಗಿ ಅವರು ವ್ಯವಸ್ಥೆಯ ಅತಿಥಿಗಳು. ಸುರಕ್ಷಿತ ಉತ್ಪನ್ನಗಳನ್ನು ಪಡೆಯುವುದು ಮತ್ತು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದುವುದು ಪ್ರತಿಯೊಬ್ಬ ಗ್ರಾಹಕನ ಆದ್ಯ ಕರ್ತವ್ಯÉ. ಮಹಾತ್ಮ ಗಾಂಧೀಜಿಯವರ ಆಶಯದಂತೆ, ಗ್ರಾಹಕರು ನಮಗೆ ಉಪಕಾರ ಮಾಡುವುದಿಲ್ಲ, ಬದಲಾಗಿ ಅವರಿಗೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡುವ ಮೂಲಕ ನಾವು ಅವರಿಗೆ ಚಿರಋಣಿಯಾಗಿರಬೇಕು ಎಂಬ ತತ್ವವನ್ನು ನಾವು ಪಾಲಿಸಬೇಕು ಎಂದರು.

ವ್ಯಾಪಾರದಲ್ಲಿ ಗ್ರಾಹಕರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತದೆÉ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಮತ್ತು ಕಾರ್ಮಿಕರಿಗೆ ಹಕ್ಕುಗಳ ಬಗ್ಗೆ ಮಾಹಿತಿ ಇಲ್ಲದೆ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಸಂವಿಧಾನಬದ್ಧವಾಗಿ ನೀಡಿರುವ ಹಕ್ಕುಗಳನ್ನು ಚಲಾಯಿಸಲು ಯಾರೂ ಹಿಂಜರಿಯಬಾರದು ಎಂದು ಅವರು ತಿಳಿಸಿದರು.

1962ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರು ಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದರ ನೆನಪಿಗಾಗಿ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷದ ದಿನಾಚರಣೆಯನ್ನು ಸುರಕ್ಷಿತ ಉತ್ಪನ್ನಗಳು-ಆತ್ಮವಿಶ್ವಾಸದ ಗ್ರಾಹಕರು” ಎಂಬ ಆಶಯದೊಂದಿಗೆ ಆಚರಿಸಲಾಗುತ್ತಿದ್ದು, ಗ್ರಾಹಕರು ಮೋಸ ಹೋದಾಗ ನ್ಯಾಯ ಪಡೆಯಲು ಗ್ರಾಹಕ ಆಯೋಗದ ಮೆಟ್ಟಿಲೇರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಈ. ಪ್ರೇಮ ಮಾತನಾಡಿ, ಭಾರತದಲ್ಲಿ 1986ರ ಗ್ರಾಹಕ ಕಾಯ್ದೆ ಜಾರಿಗೆ ಬರಲು ಮುಂಬೈನ ಕೇವಲ ಎಂಟು ಮಂದಿ ಮಹಿಳೆಯರು ನಡೆಸಿದ ಹೋರಾಟವೇ ಪ್ರೇರಣೆ. ಅಲ್ಪ ಸಂಖ್ಯೆಯ ಮಹಿಳೆಯರ ಹೋರಾಟ ಇಂದು ದೇಶಾದ್ಯಂತ ದೊಡ್ಡ ಮಟ್ಟದ ಗ್ರಾಹಕ ಚಳುವಳಿಯಾಗಿ ಬೆಳೆದು ನಿಂತಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಕೇವಲ ಶಿಕ್ಷಕಿಯರಲ್ಲ, ಅವರು ಸಮಾಜದ ತಳಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಮತ್ತು ಜನರ ಆರೋಗ್ಯ ಕಾಪಾಡುವ ಶಕ್ತಿಯಾಗಿದ್ದಾರೆ ಎಂದು ತಿಳಿಸಿದ ಅವರು, ಮಗು ಮನೆಯಿಂದ ಹೊರಗೆ ಹೆಜ್ಜೆ ಇಟ್ಟಾಗ ಅಮ್ಮನ ಸೆರಗು ಬಿಟ್ಟು ಮತ್ತೊಬ್ಬ ತಾಯಿಯನ್ನು ಅಪ್ಪಿಕೊಳ್ಳುವುದು ಎಂದರೆ ಅದು ಅಂಗನವಾಡಿ ಕಾರ್ಯಕರ್ತೆಯನ್ನು. ಅಳುವ ಮಗುವಿನ ಕಣ್ಣೀರು ಒರೆಸಿ, ಅದಕ್ಕೆ ನಲಿವಿನ ಮೂಲಕ ಸಂಸ್ಕಾರ ಮತ್ತು ಅಕ್ಷರ ಕಲಿಸುವ ಮಹತ್ತರ ಜವಾಬ್ದಾರಿಯನ್ನು ಇವರು ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರ ನೋಂದಣಿಯಿಂದ ಹಿಡಿದು, ಮಗುವಿನ ಜನನ, ಲಸಿಕೆ, ಪೌಷ್ಟಿಕ ಆಹಾರ ವಿತರಣೆ ಮತ್ತು ಅಪೌಷ್ಟಿಕತೆ ನಿರ್ಮೂಲನೆಯಲ್ಲಿ ಇವರ ಪಾತ್ರ ಅನನ್ಯ. ಸರ್ಕಾರದ ಶಕ್ತಿ ಯೋಜನೆ, ಆರ್ಥಿಕ ಸಬಲೀಕರಣದ ಸ್ವಸಹಾಯ ಸಂಘಗಳು ಹಾಗೂ ಆರೋಗ್ಯ ಇಲಾಖೆಯ ಅಂಕಿ-ಅಂಶಗಳನ್ನು ಪಂಚಾಯತ್‍ನಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ತಲುಪಿಸುವ ಜವಾಬ್ದಾರಿಯನ್ನು ಇವರು ಅತ್ಯಂತ ನಿಷ್ಠೆಯಿಂದ ಹೊತ್ತಿದ್ದಾರೆ ಎಂದು ತಿಳಿಸಿದರು.

ಜಾತಿ, ವರ್ಗ, ಭೇದವಿಲ್ಲದೆ ಸಮಾಜದ ಪ್ರತಿಯೊಂದು ಮನೆಗೆ ತಲುಪುವ ಏಕೈಕ ಶಕ್ತಿ ಅಂಗನವಾಡಿ ಕಾರ್ಯಕರ್ತೆಯರು. ವಿಧವೆಯರು, ಆರ್ಥಿಕವಾಗಿ ಹಿಂದುಳಿದವರು ಮತ್ತು ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಗೌರವಯುತ ಬದುಕು ನೀಡುವಲ್ಲಿ ಅಂಗನವಾಡಿ ಕೇಂದ್ರಗಳು ಸಾಮಾಜಿಕ ಭದ್ರತೆಯನ್ನೂ ಒದಗಿಸುತ್ತಿವೆ. ಅಂಗನವಾಡಿ ಕಾರ್ಯಕರ್ತೆಯರು ಸದಾ ತಮ್ಮ ವೈಯಕ್ತಿಕ ನೋವುಗಳನ್ನು ನಗುಮುಖದ ಹಿಂದೆ ಮರೆಮಾಚಿ, ಸಮಾಜದ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಮಹಾಮಾತೆ’ಯರು ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಯೋಗಾನಂದ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ಕಂಡು ಬರುವ ಬೆಲೆ ವ್ಯತ್ಯಾಸದ ಮೋಸ, ಕಳಪೆ ಗುಣಮಟ್ಟದ ವಸ್ತುಗಳು ಹಾಗೂ ಸೇವಾ ನ್ಯೂನತೆಗಳ ಬಗ್ಗೆ ಗ್ರಾಹಕರು ಸದಾ ಜಾಗರೂಕರಾಗಿರಬೇಕು. ಭಾರತದಲ್ಲಿ 1986ರಲ್ಲಿ ಜಾರಿಗೆ ಬಂದ ಗ್ರಾಹಕ ಸಂರಕ್ಷಣಾ ಕಾಯ್ದೆಯು ಈಗ 2019ರ ಹೊಸ ಕಾಯ್ದೆಯಾಗಿ ಮಾರ್ಪಟ್ಟು ಗ್ರಾಹಕರಿಗೆ ಹೆಚ್ಚಿನ ಬಲ ನೀಡಿದೆ ಎಂದು ತಿಳಿಸಿದರು.

ಈ ವರ್ಷ ಪ್ರಪಂಚದಾದ್ಯಂತ “ಸುರಕ್ಷಿತ ಉತ್ಪನ್ನಗಳು ಮತ್ತು ಆತ್ಮವಿಶ್ವಾಸದ ಗ್ರಾಹಕರು” ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಯಾವುದೇ ಸೇವಾ ನ್ಯೂನತೆ ಅಥವಾ ಮೋಸ ಕಂಡುಬಂದಲ್ಲಿ ಗ್ರಾಹಕರು ನೇರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ನ್ಯಾಯ ಪಡೆಯಲು ಅವಕಾಶವಿದೆ. ಸಮಾಜಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಈ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಪ್ರಚಾರ ಮಾಡಬೇಕು ಎಂದು ಯೋಗಾನಂದ ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಡಾ.ಮಂಜುನಾಥ್ ಎಂ.ಬೊಮ್ಮನಕಟ್ಟಿ, ಸಹಾಯಕ ರಿಜಿಸ್ಟ್ರಾರ್ ಬಿ.ಆರ್.ಇಂದುಬಾಯಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಜಿ.ಮಹಾಂತೇಶ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ