ಚಿಕ್ಕಮಗಳೂರು ತಾಲ್ಲೂಕು ಆವತಿ ಹೋಬಳಿ ಮಟ್ಟದ ಕಡಗಲನಾಡು ರೈತ ಉತ್ಪಾದಕ ಕಂಪನಿಯನ್ನು ಚಿಕ್ಕಮಗಳೂರಿನ ಕಾಫಿ ಮಂಡಳಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಕಾಫಿ ಮಂಡಳಿಯ ಅಧ್ಯಕ್ಷರಾದ ಎಂಜೆ ದಿನೇಶ್ ರವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು; ಸಮಾಜದಲ್ಲಿ ಒಳ್ಳೆಯವರ ಮೌನ ಸಮಾಜಕ್ಕೆ ದುಷ್ಪರಿಣಾಮ ಬೀರುತ್ತದೆ, ಜಾಗೃತ ಸಮಾಜಕ್ಕೆ ಒಳ್ಳೆಯವರು ತಕ್ಕ ಉತ್ತರ ಕೊಡಬೇಕಾಗುತ್ತದೆ. ನಾವು ಒಂದು ಗುರಿ ಇಟ್ಟುಕೊಂಡಾಗ ನಮ್ಮ ಪ್ರದೇಶಕ್ಕೆ ಪೂರಕವಾಗಿ ಒಂದು ಸಂಸ್ಥೆಯನ್ನು ಕಟ್ಟಿದ್ದೀರಿ ಇದಕ್ಕಾಗಿ ನಿಮ್ಮ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬೆಳೆಗಾರರ ಪರವಾಗಿ ಕೆಲಸ ಮಾಡುತ್ತಿರುವ ಕೃಷಿಕ ಪತ್ರಿಕೆ 10,000 ಜನರನ್ನು ಬದಲಾವಣೆಯತ್ತ ಕೊಂಡೊಯ್ಯುವ ಸಂಕಲ್ಪ ಮಾಡಿ ಪತ್ರಿಕೆ ಪ್ರಾರಂಭಿಸಿದ್ದು, ಎಲ್ಲಾ ಸಂಘ-ಸಂಸ್ಥೆಗೂ ಸಮಸ್ಯೆ ಇದ್ದದ್ದೇ, ಪ್ರತಿಯೊಂದು ಹಂತದಲ್ಲೂ ಇನ್ನೊಂದರ ಕಡೆಗೆ ಯೋಚಿಸ್ತಿರಬೇಕು ಎಂದರು.
ಕಾಫಿ ಉತ್ಪಾದನೆ ಹೆಚ್ಚಾದಾಗ ವಿದೇಶಿ ವಿನಿಮಯ ಹೆಚ್ಚಾಗುತ್ತದೆ 50,000ಕೋಟಿ ವಿದೇಶಿ ವಿನಿಮಯ ಹೊಂದುವ ಗುರಿ ಇದೆ ಎಂದರು. ಇದಕ್ಕಾಗಿ ಕಾಫಿ ಉತ್ಪಾದನೆಯನ್ನು ಹೆಚ್ಚು ಮಾಡುವ ಜೊತೆಗೆ ಹೆಚ್ಚು ಕಾಫಿ ರಫ್ತನ್ನು ಮಾಡಿದಾಗ ಈ ಗುರಿ ಹೊಂದಬಹುದು ಎಂದರು.
ಇಲ್ಲಿಯವರೆಗೆ ಕಾಫಿ ಮಂಡಳಿಗೆ 10 ಕೋಟಿ ವಾರ್ಷಿಕ ಆದಾಯ ಇತ್ತು, ಇದನ್ನು 50 ಕೋಟಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ, ಈ ಗುರಿಯೊಂದಿಗೆ ಪ್ರಸಕ್ತ 200 ಕೋಟಿ ಸಬ್ಸಿಡಿ ನೀಡಲಾಗಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಒಟ್ಟು ನೂರು ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, 10 ಸಂಘಗಳು ಕಾರ್ಯರಂಭ ಮಾಡಿವೆ, ಈಗಾಗಲೇ ದೇಶಾದ್ಯಂತ ಆಂಧ್ರಪ್ರದೇಶದಲ್ಲಿ ಸುಮಾರು 50 ತಮಿಳುನಾಡಿನಲ್ಲಿ 25 ಕೇರಳದಲ್ಲಿ 15 ಎಫ್‍ಪಿಸಿ ( ಫಾರ್ಮರ್ ಪ್ರಡ್ಯೂಸಿಂಗ್ ಕಂಪೆನಿ) ಗಳನ್ನು ಸ್ಥಾಪಿಸಲಾಗಿದೆ, ಆಂಧ್ರಪ್ರದೇಶದ ಎಂಟನೇ ತರಗತಿ ಓದಿದ ಸಂದ್ಯಾ ಎಂಬ ಒಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ 800 ಜನಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಾ ಅಸಾಧ್ಯವಾದುದ್ದನ್ನು ಸಾಧ್ಯವನ್ನಾಗಿಸಿ ಕೆಲಸ ಮಾಡುತ್ತಿದ್ದಾರೆ. ಮಲೆನಾಡು ಭಾಗಗಳಲ್ಲಿ ಕಾಫಿ ತೋಟಗಳಿಗೆ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಇದರ ಶಾಶ್ವತ ಪರಿಹಾರಕ್ಕೆ ಕೇಂದ್ರದ ಸಚಿವರುಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ದಿನೇಶ್ ತಿಳಿಸಿದರು.
ಎಕರೆಗೆ 40 ಲಕ್ಷ ಬೆಲೆಬಾಳುವ ಕಾಫಿ ತೋಟಗಳನ್ನು ಬ್ಯಾಂಕುಗಳು ಸರ್ಫಾಸಿ ಕಾಯ್ದೆ ಅಡಿ ಕೇವಲ 15 ಲಕ್ಷ ಗಳಿಗೆ ರಾಜು ಹಾಕಲಾಗುತ್ತಿದೆ ದುಬೈಯಿಂದ ಮಧ್ಯವರ್ತಿಗಳ ಮುಖಾಂತರ ತೋಟಗಳನ್ನು ಖರೀದಿ ಮಾಡುತ್ತಿದ್ದು,ಇದರ ಬಗ್ಗೆ ಕೇಂದ್ರ ವಿತ್ತ ಸಚಿವರ ಬಳಿ ಅಳಲು ತೋಡಿಕೊಂಡಾಗ ತಕ್ಷಣಕ್ಕೆ ಆನ್ಲೈನ್ ಹರಾಜು ಪ್ರಕ್ರಿಯೆ ನಿಲ್ಲಿಸಲು ಸೂಚಿಸಿದ್ದಾರೆ. ಸರ್ಫಾಸಿಯನ್ನು ಕಾಫಿಯಿಂದ ಹೊರಗಿಡುವ ಚರ್ಚೆ ನಡೆಯುತ್ತಿದ್ದು ಈ ವಿಚಾರದಲ್ಲಿ ನಮ್ಮ ಸಂಸತ್ ಸದಸ್ಯರುಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಪರ್ಕದಲ್ಲಿದ್ದಾರೆ ಎಂದರು.
ಶಿರಸಿಯ ಕದಂಬ ಎಂಬ ರೈತ ಉತ್ಪಾದಕ ಸಂಸ್ಥೆ ವಾರ್ಷಿಕ 75 ಕೋಟಿ ವಹಿವಾಟು ನಡೆಸುತ್ತಿದ್ದು, ಇಲ್ಲಿಗೆ ಭೇಟಿ ನೀಡಿ ನಿಮ್ಮ ಸಂಘವು ಕೂಡ ವಾರ್ಷಿಕ 100 ಕೋಟಿ ವಹಿವಾಟು ನಡೆಸುವ ಗುರಿಯನ್ನು ಹೊಂದಿರಿ ಎಂದು ಕರೆ ನೀಡಿದರು.
ಕಾಫಿ ಬೆಳೆಗಾರರಿಗೆ ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಚಿಕ್ಕ ಚಿಕ್ಕ ಹಲ್ಲಿಂಗ್ ಮಿಷನ್ಗಳನ್ನು ತಯಾರಿಸಿ ಬೆಳೆಗಾರರಿಗೆ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಇದರಿಂದ ಬೆಳಗಾರರಿಗೆ ಗುಣಮಟ್ಟದಲ್ಲಿರುವ ಅನುಮಾನವನ್ನು ಹೋಗಲಾಡಿಸಬಹುದು ಎಂದರು.
ಕಾಫಿ ಮಂಡಳಿಯ ಉಪನಿರ್ದೇಶಕರಾದ ವೆಂಕಟರೆಡ್ಡಿ ಇವರು ಮಾತನಾಡಿ ಸಂಘ ಸಂಸ್ಥೆ ನಿಷ್ಕ್ರಿಯ ವಾಗುವುದು ಯಾವಾಗ ಎಂದರೆ ಲಾಭದ ನಿರೀಕ್ಷೆಯನ್ನು ಪ್ರಾರಂಭದಲ್ಲೇ ಇಟ್ಟುಕೊಂಡಾಗ ಹಾಗಾಗಿ ನಿಮ್ಮ ಸಂಘವು ರೈತರಿಗೆ ಯಾವ ರೀತಿ ಉಪಯೋಗ ಮಾಡುತ್ತದೆ ಎಂಬುದರ ಬಗ್ಗೆ ಚಿಂತಿಸಿ ನಿಮ್ಮಿಂದ ರೈತ ಸಮುದಾಯಕ್ಕೆ ಹಾಗೂ ಬೆಳೆಗಾರರ ಸಮುದಾಯಕ್ಕೆ ಲಾಭವಾಗುವ ರೀತಿಯಲ್ಲಿ ವ್ಯವಹರಿಸಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುಧೀರ್ ಕಸಿಗೆ ಹಾಗೂ ಕಾರ್ಯದರ್ಶಿಯಾಗಿ ಶಶಿಧರ್ ಹೊಂಬಳದಹಳ್ಳಿ, ಖಜಾಂಚಿಯಾಗಿ ನಿವೇದಿತ್ ಬೈಗೂರು ಹಾಗೂ 10 ಪ್ರಮುಖ ನಿರ್ದೇಶಕರಗಳನ್ನು ನೇಮಕ ಮಾಡಲಾಯಿತು ಒಟ್ಟು ನೂರು ಜನ ಸದಸ್ಯರನ್ನು ಹೊಂದಿರುವ ರೈತ ಉತ್ಪಾದಕ ಕಂಪನಿ ರಿಜಿಸ್ಟರ್ ಆಗಿದ್ದು, ಆವತಿ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಬೆಳಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಲೆಕ್ಕ ಪರಿಶೋಧಕ ವೈಭವ್, ಮುಖಂಡರಾದ ರವಿ ಬಸರವಳ್ಳಿ, ಬೆರಣಗೋಡು ಮಹೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.



