ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಗುಡ್ಡಟ್ಟಿ ಗ್ರಾಮದ ಸುರೇಶ್ ಅವರ ಮನೆಯಲ್ಲಿ, ಅವರ ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಕಬೋರ್ಡ್‌ನಲ್ಲಿದ್ದ ಸುಮಾರು 169 ಗ್ರಾಂ ಚಿನ್ನಾಭರಣ ಕಳವು ಆಗಿತ್ತು. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ತಕ್ಷಣವೇ ಪೊಲೀಸರು ತನಿಖೆ ಆರಂಭಿಸಿ, ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಕೆ.ವಿ. ಮಾರ್ಗದರ್ಶನದಲ್ಲಿ, ಬಣಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಣುಕಾ ಡಿ.ವಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.
ತನಿಖೆಯ ವೇಳೆ ಆರೋಪಿಯಾದ ಹರೀಶ್ (30)ನನ್ನು ಬಂಧಿಸಲಾಗಿದ್ದು, ಆತ ಮೂಲತಃ ದಕ್ಷಿಣ ಕನ್ನಡ ಪೊಯಗುಡ್ಡೆ, ಪಂಜಿನಾಡೆ ಗ್ರಾಮದ ನಿವಾಸಿಯಾಗಿದ್ದು, ಗುಡ್ಡಟ್ಟಿ ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದವನಾಗಿದ್ದಾನೆ. ಬಂಧಿತನಿಂದ ಸುಮಾರು ₹16 ಲಕ್ಷ ಮೌಲ್ಯದ 144 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಬಣಕಲ್ ಹಾಗೂ ಮೂಡಿಗೆರೆ ಪೊಲೀಸ್ ಠಾಣೆಯ ಪೊಲೀಸರು ಭಾಗವಹಿಸಿದ್ದು, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಗಿರೀಶ್, ಕಾಳಿರಯ್ಯ, ಪ್ರದೀಪ್ ಕೆ.ಇ., ಓಂಕಾರ ನಾಯ್ಕ್ , ರಘು, ಸತೀಶ್, ಸಚಿನ್, ಮಹೇಂದ್ರ, ಬೆರಳು ಮುದ್ರೆ ಘಟಕದ ಸತೀಶ್ ಬಿ.ಎನ್., ಶಿವಕುಮಾರ್ ಎಚ್.ಆರ್. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೊಲೀಸರ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




