ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಸೌದಿ ಅರೇಬಿಯಾದ ಮದೀನಾ ಸಂಸ್ಥಾನದ ರಾಜರಾಗಿದ್ದರು ಮತ್ತು ಅಲ್ಲಿನ ಪ್ರತಿಷ್ಠಿತ ಮಸೀದಿಯ ಇಮಾಮ್ ಕೂಡ ಆಗಿದ್ದರು. ಅಂದಿನ ಕಾಲದಲ್ಲಿ ಕೂಡ ದಾನಧರ್ಮವನ್ನು ನೀಡಲು ಮುಸ್ಲಿಂ ಸಮಾಜಕ್ಕೆ ಅಲ್ಲಾಹನ ಆದೇಶದಂತೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಕರೆ ನೀಡಿದ್ದರು. ಅದರಂತೆ ದಾನ ಧರ್ಮ ನೀಡುವ ಕಾರ್ಯ ಮುಂದುವರಿದಿದೆ. ಇಸ್ಲಾಂ ಧರ್ಮ ಎಂದರೆ ದಾನ ಧರ್ಮ ನೀಡುವ ಸಮುದಾಯವಾಗಿದೆ. ಶ್ರೀಮಂತರು ತಮ್ಮ ಆದಾಯ ಮತ್ತು ಆಸ್ತಿ ಅಂತಸ್ತುಗಳ ಮೌಲ್ಯವನ್ನು ರಂಜಾನ್ ಉಪವಾಸ ವ್ರತಾಚರಣೆಯ ಒಂದು ತಿಂಗಳಲ್ಲಿ ಮೌಲ್ಯಮಾಪನ ಮಾಡಿ ಅದಕ್ಕೆ ಇಂತಿಷ್ಟು ಎಂಬಂತೆ ಲೆಕ್ಕಾಚಾರ ಹಾಕಿ ಈದ್ ಉಲ್ ಫಿತರ್ ಹಬ್ಬದ ಮುಂಚಿತವಾಗಿ ಬಡವರಿಗೆ ಕಡ್ಡಾಯವಾಗಿ ದಾನ ನೀಡಬೇಕಾಗಿದೆ. ದಾನ ನೀಡದಿರುವವರ ಸಂಪತ್ತು ಒಳಿತಿನ ಕಡೆಗೆ ಹೆಜ್ಜೆ ಹಾಕಲು ಅಸಾಧ್ಯ, ಅದು ಕೆಡುಕಿನ ಭಾಗದ ಸಂಪತ್ತು ಎಂದು ಗುರುತಿಸಲ್ಪಡುತ್ತದೆ. ದಾನ ಧರ್ಮ ನೀಡುವುದು ಉಳ್ಳವರ ಕರ್ತವ್ಯವಾಗಿದೆ. ಇಲ್ಲವಾದರೆ ಇಹ ಮತ್ತು ಪರಲೋಕದಲ್ಲಿ ವಿಜಯ ಸಾಧಿಸಲು ಹೆಣಗಾಡಬೇಕಾಗುತ್ತದೆ ಎಂದು ಎಂದು ಮೂಡಿಗೆರೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ತಿಳಿಸಿದರು.
ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ನಡೆದ ಈದ್ ಉಲ್ ಫಿತರ್ ಹಬ್ಬದ ಪ್ರಾರ್ಥನೆ ಬಳಿಕ ಮಾತನಾಡಿ ಭಾರತೀಯ ಪ್ರಜೆಯ ಸ್ಥಾನಮಾನವನ್ನು ಗಟ್ಟಿಗೊಳಿಸಲು ಸರ್ಕಾರ ರಚಿಸಿರುವ ಕಾಯಿದೆಗೆ ಗೌರವ ನೀಡುವ ಮೂಲಕ ಮತದಾರರ ಈಗಿನ ಪಟ್ಟಿಯನ್ನು 2002ರ ಪಟ್ಟಿಯಂತೆ ಮ್ಯಾಪಿಂಗ್ ಮಾಡುವುದರಿಂದ ಯಾರೊಬ್ಬರೂ ಹೊರಗುಳಿಯಬಾರದು
, ಭಾರತೀಯ ಪೌರತ್ವವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಹೆಜ್ಜೆ ಇರಿಸಿದೆ. ಸ್ಥಳೀಯ ಪ್ರಜೆಯೆಂದು ಸಾಬೀತುಪಡಿಸಲು ಹಲವಾರು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಪ್ರಾಥಮಿಕವಾಗಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ಮ್ಯಾಪಿಂಗ್ ನಿಂದ ಹೊರಗುಳಿದರೆ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಎಸ್‍ಐಆರ್ ಜಾರಿಗೆ ಬರಲಿದೆ. ಆಗ ಮ್ಯಾಪಿಂಗ್ ಕಾರ್ಯ ಇನ್ನಷ್ಟು ಕಠಿಣವಾಗಲಿದೆ. ಈಗ ಸುಲಭ ವಿಧಾನದ ಮೂಲಕ ಮ್ಯಾಪಿಂಗ್ ಕಾರ್ಯ ನಡೆಸಲು ಸರ್ಕಾರದ ಆದೇಶವಿದೆ. ಹಾಗಾಗಿ ಸ್ಥಳೀಯ ಬಿಎಲ್‍ಓಗಳನ್ನು ಭೇಟಿಯಾಗುವ ಮೂಲಕ ಮ್ಯಾಪಿಂಗ್ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ಗೌರವಾಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಉಪಾಧ್ಯಕ್ಷ ಎಂ.ಎಸ್.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಧರ್ಮ ಗುರುಗಳಾದ ಶಂಸುದ್ದೀನ್ ಯಮಾನಿ, ಯಾಕೂಬ್ ಫೈಝಿ, ಹಸೈನಾರ್ ಮುಸ್ಲಿಯರ್, ಯೂತ್ ಸಮಿತಿ ಅಧ್ಯಕ್ಷ ಅಶ್ರಫ್, ಫಾರೂಕ್, ಕಲಂದರ್, ಫಿಶ್ ಮೋಣು, ಪಿ.ಕೆ.ಹಂಝ, ಹನೀಫ್ ಅರಬಿ, ಎಚ್.ಎಸ್.ಬಿ ಕರೀಮ್, ಹಬೀಬ್, ಬಶೀರ್, ಅಜೀಜ್ ಅರಬಿ ಇತರರಿದ್ದರು.



