ಸಮಾಜದಲ್ಲಿ ಜೀವಿಸುವಾಗ ಆಕಸ್ಮಿಕವಾಗಿ ನಡೆದುಹೋಗುವ ತಪ್ಪುಗಳನ್ನು ದೇವರಲ್ಲಿ ಪ್ರಾರ್ಥಿಸಿ ಕ್ಷಮೆ ಕೇಳುವ ಮೂಲಕ ಆತ್ಮ ಶುದ್ಧಿ ಮಾಡಿಕೊಳ್ಳುವುದೇ ರಂಜಾನ್ ಉಪವಾಸದ ಸಂದೇಶವಾಗಿದ್ದು, ಜೊತೆಗೆ ದೇವರಿಗೆ ಹತ್ತಿರವಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಶನಿವಾರ ರಂಜಾನ್ ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಆಗಮಿಸಿ ಅವರಿಗೆ ಶುಭಾಶಯ ಕೋರಿ ಮಾತನಾಡಿದರು.
ಇಸ್ಲಾಂ ಧರ್ಮದಲ್ಲಿ ರಂಜಾನ್ ಆಚರಣೆಗೆ ವಿಶೇಷ ಮಹತ್ವ ಇದೆ. ಒಂದು ತಿಂಗಳು ಉಪವಾಸ ಮಾಡುವ ಮೂಲಕ ಕಠಿಣ ವ್ರತವನ್ನು ಮುಸ್ಲಿಂ ಬಾಂಧವರು ಆಚರಿಸುತ್ತಾರೆ. ಸರ್ವ ಧರ್ಮಗಳೂ ಶಾಂತಿಯನ್ನು ಬಯಸುವ ಸಂದೇಶವನ್ನು ಸಾರುತ್ತವೆ. ಈ ನಿಟ್ಟಿನಲ್ಲಿ ರಂಜಾನ್ ಹಬ್ಬದ ಪ್ರಾರ್ಥನೆ ಆಚರಣೆ ಎಲ್ಲಾ ಮುಸ್ಲಿಂ ಬಾಂಧವರಿಗೆ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಶುಭ ಹಾರೈಸಿದರು.
ಹಿಂದೂ, ಮುಸ್ಲಿಂ, ಪಾರ್ಸಿ, ಕ್ರಿಶ್ಚಿಯನ್, ಜೈನ್, ಸಿಖ್ ಸೇರಿದಂತೆ ವಿವಿಧ ಧರ್ಮಗಳನ್ನು ಹೊಂದಿರುವ ಸೌಹಾರ್ಧಯುತ ಬದುಕಿಗೆ ಪ್ರಪಂಚದಲ್ಲೇ ಹೆಸರಾದ ಜಾತ್ಯಾತೀತ ರಾಷ್ಟ್ರ ಭಾರತ ಎಂದು ಹೇಳಿದರು.
ದೇವನೊಬ್ಬ ನಾಮ ಹಲವು ಒಂದೊಂದು ಧರ್ಮದಲ್ಲೂ ವಿವಿಧ ರೀತಿಯ ಹೆಸರಿನಲ್ಲಿ ದೇವರನ್ನು ಪೂಜಿಸುವುದನ್ನು ಕಾಣುತ್ತೇವೆ. ಇಸ್ಲಾಂ ಧರ್ಮದಲ್ಲಿ ಅಲ್ಲಾಹನನ್ನು ಪೂಜಿಸಿ ಹತ್ತಿರವಾಗುವುದೇ ರಂಜಾನ್ ಹಬ್ಬದ ವಿಶೇಷ ಎಂದು ತಿಳಿಸಿದರು.
ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮದ್ ಪೈಗಂಬರ್ ಹೇಳಿದಂತೆ ಸಮಾಜದಲ್ಲಿ ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಗೆ ದಾನ ಮಾಡುವ ಮುಖಾಂತರ ಬಡವನ ಹಸಿವು ನೀಗಿಸುವವರು ದೇವರಿಗೆ ಹತ್ತಿರವಾಗುತ್ತಾರೆಂದು ಉಲ್ಲೇಖಿಸಿದ್ದಾರೆಂದು ಹೇಳಿದರು.
12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ‘ಕಲಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡ ತನ್ನ ಬಣ್ಣಿಸಬೇಡ ಇತರರ ಅಳಿಯಲೂ ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಎಂದು ಹೇಳಿದ್ದಾರೆ. ಅದರಂತೆ ಸಮಾಜದಲ್ಲಿ ಸರ್ವರೂ ಶಾಂತಿ ಸಹಬಾಳ್ವೆಯಿಂದ ಜೀವಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಮುಜಾವರ್ ಪಾಷ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರಾದ ಎ.ಎನ್ ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಹೆಚ್.ಪಿ ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್ ಅಹಮದ್, ನಗರಸಭೆ ಸದಸಯ ಶಾದಬ್ ಅಲಂ ಖಾನ್, ಮುಖಂಡರಾದ ಸಿ.ಎನ್ ಅಕ್ಮಲ್, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಜಯಕುಮಾರ್, ಡಿವೈಎಸ್‍ಪಿ ನಾಗರಾಜ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುದಾಸಿರ್ ಪಾಷಾ, ಕಾರ್ಯದರ್ಶಿ ಮುಸ್ತಫ ಉಪಸ್ಥಿತರಿದ್ದರು.


