kagga 3

 

 

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119
ಬೆಳಕಿನ ವೇಗಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು ಅರೆ ಕ್ಷಣದಲ್ಲಿ ಪ್ರಪಂಚವೆಲ್ಲವನ್ನು ಸುತ್ತಾಡಿ ಬರುತ್ತದೆ. ಹಾಗಾದರೆ ಅದರ ವೇಗ ನಿಮಗೆ ಗೊತ್ತೇ..? ಎಂದು ಪ್ರವಚನಕಾರರೊಬ್ಬರು ಪ್ರೇಕ್ಷಕರನ್ನು ಪ್ರಶ್ನೆ ಮಾಡುತ್ತಿದ್ದರು.. ಇದ್ದಕಿದ್ದಂತೆ ಗಾಢಮೌನ ಆವರಿಸಿತು. ಎಲ್ಲರ ಮೊಗದಲ್ಲೂ ಏನೋ ಗಲಿಬಿಲಿ! ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು, ಕೆಲವರು ಕಿಸೆಯಲ್ಲಿದ್ದ ಮೊಬೈಲ್ ನಲ್ಲಿ “ಗೂಗಲಮ್ಮನ” ಮೊರೆ ಹೋಗಿದ್ದರು, ಇನ್ನೊಂದೆಡೆ ಹೆಂಗಳೆಯರ ಪಿಸಿಪಿಸಿ. ಆದರೂ ಯಾರಿಗೂ ಸ್ಪಷ್ಟವಾದ ಉತ್ತರ ಸಿಗಲಿಲ್ಲವೆಂಬುದು ಅವರ ಮುಖಭಾವದಿಂದಲೇ ಗೊತ್ತಾಗಿತ್ತು. ಅವರುಗಳ ತಲೆಯಲ್ಲಿ ಈ ಪ್ರಶ್ನೆ ಭೂತಾಕಾರವಾಗಿ ನಿಂತು ಕೊನೆಗೂ ಉತ್ತರ ದೊರೆಯದೆ ಪ್ರಶ್ನಾರ್ಥಕ ಚಿನ್ಹೆಯಾಗಿ ಉಳಿದಿತ್ತು. ಆದರೆ ಎಲ್ಲರ ಚಿತ್ತ ಈಗ ಉಪನ್ಯಾಸ ಮಾಡುತ್ತಿದ್ದವರೆಡೆಗೆ ಹೊರಳಿತ್ತು. ಅವರು ಖಂಡಿತ ಲೆಕ್ಕಾಚಾರ ಹಾಕಿಕೊಂಡು ಬಂದೇ ಪ್ರಶ್ನೆ ಕೇಳಿದ್ದಾರೆ, ಈಗ ಉತ್ತರ ಎಷ್ಟು ಬರಬಹುದು ಎಂಬಂತಹ ಕುತೂ
ಹಲದ ನೋಟದಿಂದ ಸಭೆ ಗಂಭೀರವಾಗಿತ್ತು. ಆದರೆ ಇಲ್ಲಿಯವರೆಗೆ ಯಾರಿಗೂ ಕಂಡುಹಿಡಿಯಲು ಆಗಿಯೇ ಇಲ್ಲ ಎಂಬ ಉಪನ್ಯಾಸಕರ ಉತ್ತರದಿಂದ ಎಲ್ಲರಿಗೂ ನಿರಾಶೆಯಾಗಿತ್ತು. ಆದರೆ ಯಾರೂ ಸಹ “ಯಾಕೆ”? ಎಂಬ ಮರು ಪ್ರಶ್ನೆ ಹಾಕುವ ಗೋಜಿಗೆ ಹೋಗಲಿಲ್ಲ, ದಿಢೀರ್ ಉತ್ತರಕ್ಕಾಗಿ ಕಾಯುವ ಮನಸ್ಸಿಗೆ ಅವರು “ಎಲ್ಲಿ ನೀವೇ ಲೆಕ್ಕ ಹಾಕಿ ನೋಡೋಣ! ಎಂದೋ ಅಥವಾ ಬೆಳಕಿನ ವೇಗದ ಲೆಕ್ಕಾಚಾರ ಹೇಳಿ ಎಂದು ಕೇಳಿಯಾರು ಎಂಬ ಭಯ!” ಉತ್ತರವನ್ನು ಬಯಸುವ ಮನಸ್ಸಿಗೆ ಇದ್ದಕ್ಕಿದ್ದಂತೆ ತಟಸ್ಥ ಭಾವ ಬರುವುದಾದರೂ ಏಕೆ? ನೋಡಿ, ಈ ಮನಸ್ಸೇ ಹೀಗೆ! ತನಗೆ ಬೇಕೆನಿಸಿದ್ದನ್ನ ಕ್ಷಣ ಮಾತ್ರದಲ್ಲಿ ಲೆಕ್ಕಹಾಕಿ ತಾನು ಅದರೊಡನೆ ಬೆರೆತು ಸಂತೋಷ ಪಡುತ್ತದೆ, ಬೇಡವಾದಲ್ಲಿ ಮುಷ್ಕರ ಹೂಡುತ್ತದೆ. ನಮ್ಮ ಎಲ್ಲ ಚಟುವಟಿಕೆಗಳ ಕೇಂದ್ರ ಬಿಂದು ಈ ಮನಸ್ಸು, ಕ್ಷಣಕ್ಕೊಂದು ಆಲೋಚನೆ ಮಾಡುತ್ತಾ, ಒಂದಲ್ಲ ಒಂದು ಮಾಡುತ್ತಿರುತ್ತದೆ.
ಮರದ ಮೇಲೆ ಓಡಾಡುತ್ತಿರುವ ಕೋತಿಗಳನ್ನು ನೀವು ಗಮನವಿಟ್ಟು ನೋಡುತ್ತಿರಿ ಅದು ಒಂದು ಕ್ಷಣ ಕೂಡ ಒಂದೆಡೆ ನಿಲ್ಲುವುದಿಲ್ಲ, ಅತ್ತಿಂದಿತ್ತ ತಿರುಗುತ್ತಾ, ಕ್ಷಣಕ್ಕೊಂದು ಚೇಷ್ಟೆಯಲ್ಲಿ ತೊಡಗಿಕೊಂಡಿರುತ್ತದೆ. ಎಲ್ಲಿಯೂ ಸಹ ಅದು ಅರ್ಧ ನಿಮಿಷ  ಕೂಡ ನಿಲ್ಲುವುದಿಲ್ಲ. ಆ ರೀತಿ ಓಡಾಡುತ್ತಲೇ ಇರುತ್ತದೆ.. ಈ ರೀತಿ ಚಂಚಲ ಸ್ವಭಾವದ ಕೋತಿಯನ್ನು ಮನಸ್ಸಿಗೆ ಹೋಲಿಸುತ್ತಾರೆ, ಕುಳಿತಲ್ಲಿಂದಲೇ ಪ್ರಪಂಚ ಪರ್ಯಟನೆ ಮಾಡುವ ಸಾಮಥ್ರ್ಯವಿರು ವುದು ಈ ಮನಸ್ಸಿಗೆ ಮಾತ್ರ..! ಎಂತಹ ಧೀರರೇ ಆಗಲಿ ಈ ಮನಸ್ಸಿನ ಏರಿಳಿತದ ಆಟದಲ್ಲಿ ಸೋತುಹೋದ ಉದಾಹರಣೆಗಳು ಬೇಕಾದಷ್ಟಿವೆ. ಈ ಮನಸ್ಸನ್ನು ನಿಯಂತ್ರಣದಲ್ಲಿ ಇಡುವುದು ಸುಲಭದ ಮಾತಲ್ಲ, ಇದಕ್ಕಾಗಿ ಸತತ ಪರಿಶ್ರಮವಿರಬೇಕು. ನಾವು ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಂಡಾಗ ಮಾತ್ರ ಈ ಮನಸ್ಸೆಂಬ ಮರ್ಕಟ ನಮ್ಮ ಮುಷ್ಠಿಯಲ್ಲಿ ನಿಯಂತ್ರಣಕ್ಕೆ ಸಿಗುತ್ತದೆ. ಹಾಗಾದರೆ ಈ ಇಂದ್ರಿಯ ನಿಗ್ರಹ ಅಷ್ಟು ಸುಲಭ ಸಾಧ್ಯವೇ..? ಖಂಡಿತ ಇಲ್ಲ, ಇದಕ್ಕೆ ಸತತ ಪ್ರಯತ್ನ ಬೇಕೇ ಬೇಕು. ಇದರ ಸಾಧನೆಗೆ ಬೇರೆಯವರಿಗೆ ಹಾಗಲ್ಲ ಹೀಗೆ ಮಾಡಬೇಕು ಎಂದು ಬೋಧನೆ ಸುಲಭವಾಗಿ ಮಾಡಬಹುದು ಆದರೆ ಆಚರಣೆ ಬಾಯಲ್ಲಿ ಹೇಳಿದಷ್ಟು ಸುಲಭ ಅಲ್ಲ, ಎಷ್ಟೇ ಜಿತೇಂದ್ರಿಯರು ನಾವು ಅಂದುಕೊಂಡವರು ಸಹ ಎಡವಿದ ಉದಾಹರಣೆಗಳು ಪುರಾಣಕಾಲದಿಂದ ಹಿಡಿದು ಇಂದಿನವರೆಗೂ ಇದೆ, ಹಾಗಿದ್ದ ಮೇಲೆ ಈ ವೃಥಾ ಆಲಾಪ ಮಾಡದೆ ಜೀವನವನ್ನು ಎದುರಿಸಿ ಗೆಲ್ಲಬೇಕು ಎಂಬ ಗಟ್ಟಿತನ ಒಂದಿದ್ದರೆ ಅದು ನಮಗೆ ಆತ್ಮ ಬಲವನ್ನು ಕೊಡುತ್ತದೆ. ಆದ್ದರಿಂದ ಜೀವನವನ್ನು ಪ್ರೀತಿಸುತ್ತಾ ಬಂದದ್ದನ್ನು ಸ್ವೀಕರಿಸಬೇಕು ಎಂಬ ಬಗ್ಗೆ ಮಾನ್ಯ ಡಿ.ವಿ.ಜಿ.ಯವರು ಈ ರೀತಿ ಹೇಳಿದ್ದಾರೆ.
ನಯದಿಂದ ಸೋಕು, ನೀಂ ದಯೆಯಿಂದ ನೋಡದನು|
ಭಯದಿನೋಲಗಿಸು, ನೀಂ ಪೂಜೆಗೈಯದನು||
ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೋ: ಜೀವ|
ಪ್ರಿಯತಮವೊ ಸೃಷ್ಟಿಯಲಿ – ಮಂಕುತಿಮ್ಮ||
 ಉಪಾಯದಿಂದ ಮುಟ್ಟು, ಕರುಣೆಯಿಂದ ನೋಡು, ಹೆದರಿಕೆಯಿಂದ ಓಲೈಸುತ್ತಾ ಪೂಜಿಸು, ತನ್ನಷ್ಟಕ್ಕೆ ತಾನಾಗಿಯೇ ಬಂದ ಸರ್ವ ಪ್ರಪಂಚದ ಸಾರವಾದದ್ದು ಈ ಜೀವ, ಅದು ಪ್ರಪಂಚದ ಅತ್ಯಂತ ಪ್ರೀತಿಪಾತ್ರವಾದಂತಹುದು.
ಈ ಜೀವನ ಎಂಬುದು ಬಹಳ ಶ್ರೇಷ್ಠವಾದದ್ದು. ಇದು ಭಗವಂತನ ಅನುಗ್ರಹದಿಂದ ಬಂದಂತಹ ಸಮಗ್ರ ಪ್ರಪಂಚವನ್ನು ತನ್ನ ತೆಕ್ಕೆಯಲ್ಲಿ ಹುದುಗಿಸಿಟ್ಟುಕೊಂಡಿರುವಂತಹದ್ದು. ಇಂತಹ ಜೀವನವನ್ನು ತುಂಬ ನಾಜೂಕಾಗಿ ನೋಡುತ್ತಾ ಇದರ ಅಂದವನ್ನು ಕಣ್ತುಂಬಿಕೊಳ್ಳಬೇಕು. ಅಂದರೆ ಇದನ್ನು ನೀನು ನೋಡುವ ದೃಷ್ಟಿಯಲ್ಲಿ ನಿನ್ನ ಜೀವನಸಾರ ಅಡಗಿದೆ ಆದ್ದರಿಂದ ನಯವಾಗಿ, ನೋವಾಗದಂತೆ ಅನುಭವಿಸು ಇದು ಭಗವಂತ ನನಗೆ ಕೊಟ್ಟಿರುವಂತಹ ಅಮೂಲ್ಯವಾದ ಒಂದು ಉಡುಗೊರೆ ಎಂದುಕೊಂಡು ತುಂಬು ಮನಸ್ಸಿನಿಂದ ಅದರ ಏರಿಳಿತವನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸು. ಇಂದೇನೋ..? ಮುಂದೇನಿದೆಯೋ ಎಂಬ ಆತಂಕ ದಿನೇ ದಿನೇ ಇದ್ದೇ ಇರುತ್ತದೆ. ಆದರೆ ಆ ಬರುವ ದಿನಗಳನ್ನು ಆರಾಧನೆ ಎಂಬಂತೆ ಸ್ವೀಕಾರ ಮಾಡಬೇಕು. ಆಗ ಜೀವನದ ಸತ್ಯದ ಅರಿವಾಗುತ್ತದೆ, ನಾವು ಜೀವನವನ್ನು ಎಷ್ಟು ಪ್ರೀತಿಸುತ್ತೇವೆಯೋ ಅದರಲ್ಲಿ ನಮ್ಮ ಸುಖ ಅಡಗಿಕೊಂಡಿದೆ. ಇಡೀ ಪ್ರಪಂಚದ ಸಾರವನ್ನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಈ ಜೀವನ ಎಂಬುದು ಯಾವ ತರ್ಕಕ್ಕೂ ಸಹ ಸಿಗುವಂತಹದಲ್ಲ, ಜೊತೆಗೆ ನಾವೆಣಿಸಿಕೊಂಡಂತೆ ನಡೆಯುವುದೂ ಇಲ್ಲ. ಆದ್ದರಿಂದ ಹೆಚ್ಚಿನ ನಿರೀಕ್ಷೆ ಮಾಡದೆ ಬಂದದ್ದನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ ಜೀವನವನ್ನು ಪ್ರೀತಿಯಿಂದ ಎದುರಿಸುವ ಮನೋಭಾವ ಬೆಳೆಸಿಕೊಂಡಾಗ ನಮಗೆ ಭಗವಂತನ ಸೃಷ್ಟಿಯ ಹಿಂದಿರುವ ಸತ್ಯದ ಅರಿವು ಗೋಚರಕ್ಕೆ ಬರುತ್ತದೆ. ಆದ್ದರಿಂದ ಕಾಲಕ್ಕನುಗುಣವಾಗಿ, ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಇದು ನಮ್ಮ ಸಾಫಲ್ಯಕ್ಕಾಗಿ ದೊರಕಿರುವ ಅವಕಾಶ ಎಂದುಕೊಳ್ಳುತ್ತಾ ಪ್ರತಿದಿನವನ್ನು ಸಹ ನಮ್ಮ ಸಾರ್ಥಕತೆಯ ಉತ್ತುಂಗಕ್ಕೆ ಏರುವ ಮೆಟ್ಟಿಲು ಎಂಬಂತೆ ಪೂಜನೀಯ ಭಾವದಿಂದ ನೋಡುತ್ತಾ ಬದುಕನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದೇ ನಿಜವಾದ ಜೀವನ.
ಇಂತಹ ಜೀವನದಲ್ಲಿ ನಾವು ಹತ್ತು-ಹಲವಾರು ಮಜಲುಗಳನ್ನು ಕಾಣುತ್ತಾ ಸಾಗುತ್ತೇವೆ, ಹೀಗೆ ಸಾಗುತ್ತಿರುವಾಗ ಸಾವಿರಾರು ಜನ ನಮಗೆ ಸ್ನೇಹಿತರಾಗಬಹುದು, ಹಿತೈಷಿಗಳಾಗ ಬಹುದು, ದ್ವೇಷಿಗಳು ಆಗಬಹುದು ಇವೆಲ್ಲವೂ ಸರ್ವೇ ಸಾಮಾನ್ಯ. ಅದರಲ್ಲೂ ಕೆಲವು ಜನರು ತಾವೇ ಪರಮಗುರುಗಳು ಎಂಬಂತೆ ಎಲ್ಲರಿಗೂ ಉಪದೇಶ ಮಾಡುವವರೇ ಆಗಿರುತ್ತಾರೆ. ಇಂದು ಪ್ರೀತಿಯಿಂದ ಇದ್ದವರು ಇದ್ದಕ್ಕಿದ್ದಂತೆ ನಾಳೆ ಅಪರಿಚಿತರೂ ಆಗಬಹುದು ಇವೆಲ್ಲವೂ ಸಹ ನಮ್ಮ ಅರಿವಿಗೆ ಬಾರದಂತೆ ನಡೆದು ಹೋಗುವ ನಿತ್ಯದ ಆಗುಹೋಗುಗಳು. ಇವುಗಳ ನಡುವೆ ಇರುವ ಕೆಲವರು ಹೇಗಿರುತ್ತಾರೆಂದರೆ:-
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ|
ಜೀವನಪರೀಕ್ಷೆ ಬಂದಿದಿರು ನಿಲುವತನಕ||
ಭಾವಮರ್ಮಂಗಳೇಳುವುವಾಗ ತಳದಿಂದ|
ದೇವರೇ ಗತಿಯಾಗ – ಮಂಕುತಿಮ್ಮ||
ಎಲ್ಲರೂ ಸಾಧುಸಂತರೇ, ಎಲ್ಲರೂ ಬೋಧನೆ ಮಾಡುವವರೇ, ಆದರೆ ಜೀವನದಲ್ಲಿ ಅವರಿಗೇ ಸಂಕಷ್ಟ ಎದುರಾದಾಗ ಅವರ ಮನಸ್ಸಿನ ಭಾವ ಹೊರಬರುತ್ತದೆ. ಆಗ ಅವರನ್ನು ದೇವರೇ ಕಾಪಾಡಬೇಕು.
ಇನ್ನೊಬ್ಬರಿಗೆ ಉಪದೇಶ ಮಾಡುವುದು ಬಹಳ ಸುಲಭ ಅದಕ್ಕೆ ಯಾವ ಪೂರ್ವ ತಯಾರಿಯೂ ಬೇಡ, ಒಂದು ಲೆಕ್ಕದಲ್ಲಿ ಎಲ್ಲರೂ ಸಹ ಬೋಧನೆ ಮಾಡುವವರೆ ಆಗಿರುತ್ತಾರೆ, ಅದು ಎಲ್ಲಿಯತನಕ ಅಂದರೆ ಅವರಿಗೇ ಜೀವನದಲ್ಲಿ ಸವಾಲು ಎದುರಾಗುವ ವರೆಗೂ ಅಷ್ಟೇ, ಸ್ವತಃ ತಮಗೇ ಕಷ್ಟಗಳು ಸವಾಲು ಹಾಕುವಾಗ ಸಮಸ್ಯೆ ಬೆಟ್ಟದಂತಾಗುತ್ತದೆ, ಆಗ ಅವರ ಮನದಾಳದಲ್ಲಿ ಅಡಗಿಕೊಂಡಿರುವ ನಿಜವಾದ ಬಣ್ಣ ಬಯಲಿಗೆ ಬರುತ್ತದೆ. ಏಕೆಂದರೆ ನಿಜ ಪರಿಸ್ಥಿತಿಯನ್ನು ಎದುರಿಸುವುದು ಮತ್ತೊಬ್ಬರಿಗೆ ಉಪದೇಶ ಮಾಡಿದಷ್ಟು ಸುಲಭವಲ್ಲ, ಆ ಸಮಯದಲ್ಲಿ ಮನುಷ್ಯ ತುಂಬ ಜಾಗರೂಕನಾಗಿ ಉಪಾಯದಿಂದ ಬಂದ ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ, ಆದರೆ ಸರ್ವೇ ಸಾಧಾರಣವಾಗಿ ಜನರು ಅಂತಹ ಸಮಯದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ ಬೇಡವಾದ ಆಲೋಚನೆಗಳನ್ನು ಮಾಡುತ್ತಾರೆ ಮತ್ತು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಆದ್ದರಿಂದ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಧೈರ್ಯವಾಗಿ ಅದನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಂದು ವಿಚಲಿತರಾಗದೆ ಅದನ್ನು ಎದುರಿಸಿ ನಿಲ್ಲುವ ಸಾಮಥ್ರ್ಯವನ್ನು ಹೊಂದಬೇಕು, ಅಂತಹ ಮನೋಬಲ ಉಳ್ಳವರು ಬೇರೊಬ್ಬರು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಅವರನ್ನು ಸಹ ಅದರಿಂದ ಪಾರುಮಾಡುವ ಸಾಮಥ್ರ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ನಾವು ನಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗ ನಮಗೆ ನಮ್ಮೆದುರು ಇರುವೆ ಹೋದರೂ ಸಹ ಆನೆ ಹೋದಂತೆ ಭಾಸವಾಗುತ್ತದೆ. ಆಗ ಪರಿಸ್ಥಿತಿ ಉಗುರಿನಿಂದ ಹೋಗುವ ಗಾಯಕ್ಕೆ ಕೊಡಲಿ ತೆಗೆದುಕೊಂಡಂತೆ ಆಗುತ್ತದೆ. ಚಿಕ್ಕಪುಟ್ಟದಕ್ಕೂ ದೊಡ್ಡ ಹೆಬ್ಬಂಡೆ ತಲೆಯಮೇಲೆ ಬಿದ್ದಂತೆ ಭಾವಿಸಿಕೊಂಡು ಅನಾವಶ್ಯಕವಾಗಿ ನರಳುತ್ತೇವೆ. ಆಗ ಭಗವಂತನೇ ನಮ್ಮನ್ನು ಪಾರುಮಾಡಬೇಕೇ ಹೊರತು ಅನ್ಯಮಾರ್ಗವಿಲ್ಲ.
ಒಂದು ರೀತಿಯಲ್ಲಿ ಎಲ್ಲರೂ ದೃಢಮನಸ್ಸುಳ್ಳವರೇ ನಾವು ಎಂದುಕೊಳ್ಳುತ್ತೇವೆ. ಆದರೆ ಸಮಯ ಹಾಗೂ ಸನ್ನಿವೇಶ ಎಲ್ಲರನ್ನು ಕ್ಷಣಮಾತ್ರದಲ್ಲಿ ಬದಲಿಸಿಬಿಡುತ್ತದೆ. ‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬಂತೆ, ಚಂಚಲಮನಸ್ಸು ನಮ್ಮನ್ನು ದಿಕ್ಕು ತಪ್ಪಿಸಿಬಿಡುತ್ತದೆ.
ಎಲ್ಲರುಂ ಜಿತಮನಸಕ್ಕರೆ ದೈವ ವಿಧಿ ಮಾಯೆ|
ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ||
ವಲ್ಗುರೂಪೆ ಸುಭದ್ರೆ ಕುಣ್ಮುಂದೆ ಸುಳಿವನಕ|
ಫಲ್ಗುಣನು ಸನ್ಯಾಸಿ – ಮಂಕುತಿಮ್ಮ||
ದೈವ ವಿಧಿ ಮತ್ತು ಮಾಯೆಯು ಚೆಲುವಾದ ರೂಪಿನಿಂದ ಬಂದು ಕಣ್ಣುಗಳನ್ನು ಕುಕ್ಕುವತನಕ ಎಲ್ಲರೂ ಜಿತಮನಸ್ಕರೆ ಆಗಿರುತ್ತಾರೆ, ಹೇಗೆಂದರೆ ಚೆಲುವಾದ ಸುಭದ್ರೆಯನ್ನು ನೋಡುವತನಕ ಅರ್ಜುನನು ಸನ್ಯಾಸಿಯಾಗಿದ್ದ ನಂತರ ಅವಳನ್ನು ವರಿಸಿದ.
ಅರ್ಜುನ ಸನ್ಯಾಸಿಯಾಗಿ ತೀರ್ಥಯಾತ್ರೆ ಮಾಡಲು ಹೋದಾಗ ಚೆಲುವೆಯಾದ ಸುಭದ್ರೆ ಅವನ ಕಣ್ಣಿಗೆ ಬಿದ್ದಳು ಅಲ್ಲಿಯವರೆಗೆ ಸನ್ಯಾಸಿಯಾಗಿದ್ದ ಮನ ಒಮ್ಮೆಲೆ ಚಂಚಲವಾಯಿತು, ಸನ್ಯಾಸತ್ವವನ್ನು ಬಿಟ್ಟು ಸುಭದ್ರೆಯನ್ನು ಮದುವೆಯಾದ ಅಭಿಮನ್ಯುವಿ ನಂತಹ ವೀರಾಧಿವೀರ ಮಗನನ್ನು ಪಡೆದ ಅಂದರೆ ಮನಸ್ಸನ್ನು ಗಟ್ಟಿಯಾಗಿ ನೆಲೆನಿಲ್ಲಿಸಿಕೊಳ್ಳುವುದು ಎಷ್ಟು ಕಠಿಣವಾದ ಕೆಲಸ ಎಂಬುದನ್ನು ನಾವು ಕಾಣಬಹುದು. ಪುರಾಣಗಳಲ್ಲಿ ಋಷಿಮುನಿಗಳ ಸಂಯಮ ಸಡಿಲಗೊಂಡ ಅನೇಕ ಕಥೆಗಳನ್ನು ನೋಡುತ್ತೇವೆ. ಇಂದ್ರಿಯಗಳನ್ನು ಗೆಲ್ಲುವುದು ಅತ್ಯಂತ ಶ್ರಮದಾಯಕ ಅದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕು, ಮನಸ್ಸು ಮರ್ಕಟನಂತೆ ಸದಾ ಏನಾದರೊಂದು ಆಲೋಚನೆಯಲ್ಲಿ ತೊಡಗಿಸಿಕೊಂಡೇ ಇರುತ್ತದೆ ಇಂತಹ ಮನಸ್ಸನ್ನು ಹಿಡಿದು ಕಟ್ಟುವುದು ಎಂದರೆ ಸುಲಭದ ಮಾತಲ್ಲ.
ಮನೋನಿಗ್ರಹವನ್ನು ಮಾಡಿಕೊಳ್ಳಲು ನಾವು ಧ್ಯಾನ, ಪ್ರಾಣಾಯಾಮ ಮುಂತಾದವುಗಳನ್ನು ಮಾಡುತ್ತಾ ಹಂತ ಹಂತವಾಗಿ ಸಾಧನೆ ಮಾಡಬೇಕು, ಒಮ್ಮೆಲೆ ಕಣ್ಣುಮುಚ್ಚಿ ಕುಳಿತು ಸನ್ಯಾಸಿಯಾದೆ ಎನ್ನಲು ಸಾಧ್ಯವೇ ಇಲ್ಲ. ಈ ಆತ್ಮ ಸಂಯಮಕ್ಕೆ ನಮಗೆ ಹುಟ್ಟಿನಿಂದ ಬರುವ ಸಂಸ್ಕಾರವೂ ಸಹ ಪೂರಕವಾಗಿ ಕೆಲಸಮಾಡುತ್ತದೆ. ನಮ್ಮಲ್ಲಿರುವ ಆಸೆಯನ್ನು ಮೊದಲು ಹತ್ತಿಕ್ಕಿ ಗೆಲ್ಲಬೇಕು, ಈ ಮೋಹಪಾಶವು ನಮ್ಮ ದೆಸೆಯನ್ನೇ ಬದಲಾಯಿಸುತ್ತದೆ. ಆದಷ್ಟು ಪ್ರಾಪಂಚಿಕ ಸುಖಭೋಗಗಳು ಕ್ಷಣಿಕ ಎಂಬುದನ್ನು ಅರಿಯುವ ಪ್ರಯತ್ನವಿದ್ದಾಗ ಸ್ವಲ್ಪವಾದರೂ ನಾವು ಈ ಮನಸ್ಸನ್ನು ಹಿಡಿತದಲ್ಲಿಡುವತ್ತ ಸಾಗಬಹುದು.
ಈ ಮನಸ್ಸೆಂಬ ಮರ್ಕಟವನ್ನು ಒಂದೆಡೆ ನಿಲ್ಲಿಸುವುದು ಅಸಾಧ್ಯವಲ್ಲವೆಂದಾದರೂ ಸಹ ಸಾಧನೆ ಮಾಡುವುದು ಸಹ ಕಷ್ಟದ ಕೆಲಸವೇ.. ಕೆಲವರು ಮಾತಿಗೊಮ್ಮೆ “ನಾನು ಮನಸ್ಸು ಮಾಡಿದರೆ ಮಾಡಿಯೇ ಬಿಡುತ್ತೇನೆ” ಎನ್ನುತ್ತಾರೆಯೇ ಹೊರತು ಅವರಿಂದ ಕಾರ್ಯಗತವಾಗುವುದಿಲ್ಲ, ಇನ್ನು ಕೆಲವರು ಬಾಯಲ್ಲಿ ಏನನ್ನು ಹೇಳದೆಯೇ ಸಾಧನೆ ಮಾಡಿರುತ್ತಾರೆ. ಇದೆಲ್ಲವೂ ಸಹ ಈ ಮನಸ್ಸಿನ ಆಟಗಳೇ ಅಲ್ಲವೇ..? ಸಾಧ್ಯವಾದಷ್ಟು ಒಳ್ಳೆಯ ಆಲೋಚನೆಯಲ್ಲಿ ತೊಡಗಿಕೊಳ್ಳುವಂತೆ ಈ ಮರ್ಕಟಕ್ಕೆ ಬುದ್ಧಿ ಹೇಳಿಕೊಳ್ಳುವ ಮನಸ್ಸು ನಮ್ಮದಾಗಬೇಕು.
ವಿಧಿಯ ವೈಚಿತ್ರ್ಯಗಳು ಮನುಜನ ಮನಸ್ಸಿನ ಮೇಲೆ ಬೀರುವ ಪ್ರಭಾವಗಳನ್ನು ತಡೆಯಲು ಅಸಾಧ್ಯ ಎಂಬುದಕ್ಕೆ ದೃಢಚತ್ತನಾಗಿದ್ದ ಅರ್ಜುನನ ಮನಸ್ಸು ಚಂಚಲವಾಗಿದ್ದು ಒಂದು ಉದಾಹರಣೆಯಷ್ಟೇ. ಚಂಚಲ ಮನಸ್ಸಿನ ಭಾವನೆಗಳ ಹೋರಾಟವು ನಮ್ಮ ಜೀವನದಲ್ಲಿ ದಿನನಿತ್ಯ ನಡೆಯುವಂತಹದೆ. ಘಟನೆ ನಡೆದ ನಂತರ ಎಂತಹ ಅಚಾತುರ್ಯ ನಡೆದುಹೋಯಿತಲ್ಲ ಎಂಬ ಪಶ್ಚಾತ್ತಾಪವನ್ನು ಸಹ ಇದೇ ಮನಸ್ಸು ಮಾಡುತ್ತಲೇ ಇರುತ್ತದೆ, ಹಾಗಾಗಿ ಈ ಮನಸ್ಸಿನೊಳಗಿನ ಲೆಕ್ಕಾಚಾರ ಯಾರ ಕೈಗೂ ಸಹ ಸಿಗುವುದಿಲ್ಲ ಎಂಬುದಂತೂ ಕಟು ಸತ್ಯವೇ ಸರಿ.
******************

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ