ಸಮಾಜ ಸೇವೆಯ ಮಹತ್ತರ ಧ್ಯೇಯದೊಂದಿಗೆ ರೋಟರಿ ಸಂಸ್ಥೆ ವಿಶ್ವದಾದ್ಯಂತ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಪಿಎಚ್‍ಎಫ್ ಕೆ.ಪಾಲಾಕ್ಷ ಹೇಳಿದರು.
ಅವರು ಬುಧವಾರ ಸಂಜೆ ಮೂಡಿಗೆರೆ ಬೀಜವಳ್ಳಿ ಸಮೀಪದ ಸಾರ್ವಜನಿಕರ ರೋಟರಿ ಚಿತಾಗಾರದಲ್ಲಿ ಗ್ಯಾಸ್ ಬರ್ನರ್ ಮತ್ತು ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ನಂತರ ಪಟ್ಟಣದ ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಗವರ್ನರ್ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫಲ್ಸ್ ಪೊಲೀಯೋ ಲಸಿಕೆ ನೀಡುವಂತಹ ಮಹತ್ತರವಾದ ಕಾರ್ಯ ರೋಟರಿ ಸಂಸ್ಥೆಯಿಂದ ನಡೆದಿದೆ. ಅಲ್ಲದೇ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಕುಡಿಯುವ ನೀರು, ಮಹಿಳಾ ಸಬಲೀಕರಣ ಹಾಗೂ ಯುವಜನತೆಗೆ ಮಾರ್ಗದರ್ಶನ ನೀಡುವ ಕ್ಷೇತ್ರಗಳಲ್ಲಿ ರೋಟರಿ ಸಂಘದ ಕೊಡುಗೆ ಅಪಾರವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಜನರ ಜೀವನಮಟ್ಟ ಸುಧಾರಿಸುವಂತಹ ಜನಪರ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕೆಂದು ಹೇಳಿದರು.
ಅಸಿಸ್ಟೆಂಟ್ ಗವರ್ನರ್ ಸಿ.ಎಸ್.ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ರೋಟರಿ ಸಂಸ್ಥೆ ಉತ್ತಮವಾಗಿ ಬೆಳವಣಿಗೆ ಕಾಣುತ್ತಿದೆ. ಸಮಾಜದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸಲು ಎಲ್ಲರೂ ಕೈಜೋಡಿಸಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಮುಖ್ಯವಾಗಿ ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಚ್.ಎನ್.ಪ್ರಸಾಧ್ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ಎಚ್.ಎ.ಆದರ್ಶ, ಕಾರ್ಯದರ್ಶಿ ಕೆ.ವಿ.ವಿಕಾಸ್, ರೇಖಾ ಪಾಲಾಕ್ಷ ಮತ್ತಿತರರಿದ್ದರು.



