IMG-20260403-WA0017

 

 

ಮೂಡಿಗೆರೆ ಪಟ್ಟಣದ ಬೆಳೆಗಾರರ ಸಂಘದ ಭನದಲ್ಲಿ ಮೂಡಿಗೆರೆ ಬೆಳೆಗಾರರ ಸಂಘ , ಕೆಜಿಎಫ್ ಸಹಯೋಗದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲಾ ಉನ್ನತ ಅರಣ್ಯ ಅಧಿಕಾರ ಜೊತೆ ಆಯೋಜಿಸಿದ್ದ ಸಂವಾದ, ಸಮಲೋಚನ ಸಭೆಯನ್ನು ಗುರುವಾರ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು ಮಾತನಾಡಿ ; ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. 30 ರಿಂದ 40 ಆನೆಗಳ ಗುಂಪು ಕಾಫಿ ತೋಟಗಳಿಗೆ ನುಗ್ಗಿ ಸರ್ವನಾಶ ಮಾಡುತ್ತಿವೆ. ಅವುಗಳನ್ನು ಅರಣ್ಯ ಸಿಬ್ಬಂದಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಟ್ಟುವುದಕ್ಕೆ ಆದ್ಯತೆ ನೀಡದೇ ಮೂರು ಜಿಲ್ಲೆಗಳ ಅಧಿಕಾರಿಗಳು ಸೇರಿ ಒಮ್ಮತದಿಂದ ಕಾಡಾನೆಗಳನ್ನು ಅಭಯಾರಣ್ಯಗಳಿಗೆ ಅಟ್ಟುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಇಂದಿನ ಸಭೆಯನ್ನು ಆಯೋಜಿಸಿದ್ದು, ಇದೊಂದು ನಿರ್ಣಾಯಕ ಸಭೆಯಾಗಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಅಧಿಕಾರಿಗಳು ಕ್ರಮ ವಹಿಸಬೇಕು, ಕಾಡಾನೆಗಳನ್ನು ಕಾಡಿಗೆ ಅಟ್ಟಲು   ರೈತರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಆದರೆ ಅವುಗಳು ಮತ್ತೆ ತಿರುಗಿ ಬಾರದ ಹಾಗೆ ನಾಗರಹೊಳೆ ಅಭಯಾರಣ್ಯದತ್ತ ಕಳಿಸುವಂತೆ ಮನವಿ ಮಾಡಿದರು.

ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್. ರಘು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ; ಅರಣ್ಯ ಅಧಿಕಾರಿಗಳು ಮನಸ್ಸು ಮಾಡಿದರೆ ಕಾಡಾನೆ ಹಾವಳಿಗೆ ಪರಿಹಾರ ಸಾಧ್ಯವಿದೆ. ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಿ ಕಾಡಾನೆಗಳಿಂದ ಕಾಫಿನಾಡಿನ ಜನರಿಗೆ ಮುಕ್ತಿ ನೀಡುವ ಕೆಲಸ ಮಾಡಬೇಕು ಎಂದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್  ಮಾತನಾಡಿ ; ಕಾಡು ಪ್ರಾಣಿಗಳ ಸಂಘರ್ಷದಿಂದ ಬೆಳೆಗಾರರು ಸಾಕಷ್ಟು ಸಾವು ನೋವು ಅನುಭವಿಸುವುದರೊಂದಿಗೆ ಬೆಳೆ ನಷ್ಟದಿಂದ ಕೈಸುಟ್ಟುಕೊಂಡಿದ್ದಾರೆ. ಕಾಡು ಪ್ರಾಣಿಗಳ ಸಂಘರ್ಷದಿಂದ ಬೆಳೆಗಾರರನ್ನು ರಕ್ಷಿಸಿ ಶಾಶ್ವತ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸುತ್ತಿದ್ದು, ಕಾಫಿ ಬೆಳೆಗಾರರ ಹಿತದೃಷ್ಠಿಯಿಂದ ಅರಣ್ಯ ಇಲಾಖೆಯೊಂದಿಗೆ ಕಾಫಿ ಮಂಡಳಿ ಕೈಜೋಡಿಸಲು ಸದಾ ಸಿದ್ದ ಎಂದರು.

ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಮಾತನಾಡಿ  ಆನೆಗಳು ಮತ್ತು ಮಾನವನ ಸಂಘರ್ಷ ಕಳೆದ 2 ದಶಕಗಳಿಂದ   ನಡೆಯುತ್ತಿದೆ. ಆದರೆ ಅದರಿಂದ ಶಾಶ್ವತ ಪರಿಹಾರ ಮಾತ್ರ ಇನ್ನು ಮರಿಚಿಕೆಯಾಗಿದೆ. ಈಗ  ಅರಣ್ಯ ಇಲಾಖೆಯ ಅಧಿಕಾರಿಗಳೇ ಸಾರ್ವಜನಿಕರನ್ನು ಕಾಪಾಡುವ ದೇವರೆಂದರೇ ತಪ್ಪಾಗಲಾರದು. ಹಲವು ದಶಕಗಳಿಂದ ಕಾಡುತ್ತಿರುವ ಮಾನವ ವನ್ಯ ಜೀವಿಗಳ ಸಂಘರ್ಷ ಪರಿಹಾರವನ್ನು ಮಾಡಲು ಶ್ರೀಲಂಕಾ ಮಾದರಿಯ ಆನೆಧಾಮ ಮತ್ತು ಅಸ್ಸಾಂ ಮಾದರಿಯ ಯೋಜನೆಗಳನ್ನು ಕಾರ್ಯಗತ ಮಾಡಿದಲ್ಲಿ ಮಲೆನಾಡಿಗರ ಆನೆ ಸಮಸ್ಯೆಯಿಂದ ಪರಿಹಾರ ದೊರಕಲು ಸಾಧ್ಯ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ. ಮಲೆನಾಡು ಪ್ರದೇಶಗಳಲ್ಲಿ ಕಾಡಾನೆ ಸೇರಿದಂತೆ ಕಾಡು ಕೋಣ, ಹುಲಿ, ಚಿರತೆ, ಕರಡಿ ಮತ್ತು ಮಂಗಗಳ ಕಾಟ ಅಧಿಕವಾಗಿದ್ದು ಅವುಗಳಿಗೆ ಸಂತಾನಾಭಿವೃದ್ದಿ ತಡೆಯುವ ಚಿಕಿತ್ಸೆ ಮಾಡಿದಲ್ಲಿ ಅವುಗಳ ಸಂಖ್ಯೆಯನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಚಿಂತನೆಗಳು ಆಗಬೇಕು ಎಂದು ಸಲಹೆ ನೀಡಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಂ ಮಾತನಾಡಿ. ಮಾನವ ಸಂಪನ್ಮೂಲ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ. ಪರಿಹಾರ ಒಂದೇ ಮಾರ್ಗವಲ್ಲಾ ಆದಷ್ಟು ಕಾಡು ಪ್ರಾಣಿಗಳನ್ನು ಕಾಡಿನಿಂದ ಹೊರಗೆ ಬಾರದ ಹಾಗೆ ಶಾಶ್ವತ ಪರಿಹಾರ ಒದಗಿಸಬೇಕೆಂದರು.

ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ ಮಾತನಾಡಿ ಅರಣ್ಯ ಇಲಾಖೆ ವಿವಿಧ ಜಿಲ್ಲೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು, ರೈತರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದು, ತೀವ್ರವಾಗಿ ನೊಂದಿದ್ದಾರೆ. ಸರ್ಕಾರ ತಕ್ಷಣದ ಕ್ರಮಗಳನ್ನು ಕಾರ್ಯಗತಗೊಳಿಸಿ ಕಾಡಾನೆಗಳಿಂದ ಜನರಿಗ ಮುಕ್ತಿನೀಡಬೇಕು ಎಂದರು.

ಈ ಸಂದರ್ಭದಲ್ಲಿ ಮೂಡಿಗೆಗೆ ಬೇಲೂರು ಭಾಗದ ರೈತರು ಕಾಡಾನೆಗಳಿಂದ ತಮಗಾಗುತ್ತಿರುವ ಅಪಾರ ನಷ್ಟದ ಬಗ್ಗೆ ಆಕ್ರೋಶಭರಿತರಾಗಿ ತಮ್ಮ ನೋವನ್ನು ಹೊರಹಾಕಿದರು.

ಬೆಳಗಾರರ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಚಿಕ್ಕಮಗಳೂರ, ಹಾನ, ಕೊಡಗು ಜಿಲ್ಲೆಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ; ಕಾಡಾನೆಗಳನ್ನು ಅವುಗಳ ಮೂಲ ಸ್ಥಾನಕ್ಕೆ ಅಟ್ಟಬೇಕು ಎಂಬ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಅರಣ್ಯ ಸಿಬ್ಬಂದಿಗಳು ಸತತ ಪ್ರಯತ್ನ ನಡೆಸುತ್ತಿವೆ. ಅವುಗಳ ಸಹಜ ಚಲನವಲನಗಳನ್ನು ಆದರಿಸಿಯೇ ನಾವು ಅವರುಗಳನ್ನು ನಾಗರಹೊಳೆ ಅಥವಾ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುತ್ತಿದ್ದೇವೆ.   ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಎಲ್ಲಾ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಕಾಡಾನೆ ಸಮಸ್ಯೆಯ ಬಗ್ಗೆ ಅಧ್ಯಯನ ವರದಿಯನ್ನು ಎನ್.ಜಿ.ಓ ಸದಸ್ಯರು ಸಭೆಗೆ ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ  ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್ವಾಲ್ ಕ್ಷೀರ್ ಸಾಗರ್ , ಕೊಡಗಿನ ಶ್ರೀಮತಿ ಸೋನಾಲ್, ಹಾಸನದ ಏಡುಕೊಂಡಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಿಕ್ಕಮಗಳೂರಿನ ರಮೇಶ್ ಬಾಬು, ಹಾಸನದ ಸೌರಬ್ ಕುಮಾರ್, ಕೊಡಗಿನ ಅಭಿಷೇಕ್, ಕೊಪ್ಪದ ಶಿವ ಶಂಕರ್, ಭದ್ರ ಅರಣ್ಯ ಸಂರಕ್ಷಣಾ ಪ್ರದೇಶದ ಪುಲ್ಕಿತ್ ಮೀನ, ಮೂಡಿಗೆರೆ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪೂರ್ಣೆಶ್ ಜಿ.ಹೊಸಳ್ಳಿ,  ವಿಕ್ರಂ ಹುರುಡಿ, ದೀಪಕ್ ದೊಡ್ಡಯ್ಯ,  ವಿವಿಧ ತಾಲ್ಲೂಕು ಮತ್ತು ಹೋಬಳಿ ಬೆಳೆಗಾರರ ಸಂಘದ, ಸಹಕಾರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೂಡಿಗೆರೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ