ಚಿಕ್ಕಮಗಳೂರು ಗಿರಿ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಶವ ಪತ್ತೆಯಾಗಿದೆ. ಗಿರಿ ಪ್ರದೇಶದ ಆಳವಾದ ಕಂದಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಅರಿಶಿನಗುಪ್ಪಿಯಿಂದ 5 ಕಿ.ಮೀ ದೂರದ, ಸುಮಾರು 1500 ಅಡಿ ಪ್ರಪಾತದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ಸಂಜೆ ಕುಟುಂಬ ಸಮೇತ ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಕಣ್ಮರೆಯಾಗಿದ್ದಳು. 41 ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್‍ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಆದರೆ, ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿದ್ದಳು. ಕಾಣೆಯಾದ ಮೂರು ದಿನಗಳ ನಂತರ ಇದೀಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಬಾಲಕಿ ನಾಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಲವು ತಂಡಗಳನ್ನಾಗಿ ಮಾಡಿಕೊಂಡು ಶೋಧಕಾರ್ಯಕ್ಕೆ ಇಳಿದಿತ್ತು. ಬಾಲಕಿ ನಾಪತ್ತೆಯಾಗಿದ್ದ ಜಾಗ ತೀವ್ರ ಕಡಿದಾದ ಪ್ರದೇಶವಾಗಿದ್ದು ಅಲ್ಲಿಂದ ಯಾವ-ಯಾವ ಮಾರ್ಗದಲ್ಲಿ ಹೋಗಲು ಸಾಧ್ಯವಿರುತ್ತೋ ಆ ಮಾರ್ಗದಲ್ಲೆಲ್ಲಾ ತಂಡ ಹುಡುಕಾಡಿತ್ತು. ಆದರೆ ಬಾಲಕಿ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.

ಮೃತದೇಹವನ್ನು ಪ್ರಪಾತದಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಗಿದೆ. ಶ್ರೀನಂದಾ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜನದಟ್ಟಣೆಯಿಂದ ಶ್ರೀನಂದಾ ಹೇಗೆ ನಾಪತ್ತೆಯಾದಳು, ಪ್ರಪಾತಕ್ಕೆ ಹೇಗೆ ಬಿದ್ದಳು, ಇದು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರುವುದೇ ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಿಂದ ಮತ್ತು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಷ್ಟೆ.



