ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ್ಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ನರಸಿಂಹರಾಜಪುರ ತಾಲ್ಲೂಕಿನ ಹಿಳುವಳ್ಳಿ ಗ್ರಾಮದ ಟಿ.ಬಿ.ಸರ್ಕಲ್ ಬಳಿ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣಾ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದದರು.
2023ರ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಗಳಿಗಾಗಿ ಇದುವರೆಗೆ ಸುಮಾರು 1,31,000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ ಯೋಜನೆಗಳು ಜಾರಿಯಾಗಿ ಮೂರು ವರ್ಷಗಳಾದರೂ ರಾಜ್ಯದ ಆರ್ಥಿಕತೆ ಭದ್ರವಾಗಿದೆ. ಕರ್ನಾಟಕವನ್ನು ನೋಡಿ ಇಂದು ಗುಜರಾತ್, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳೂ ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿವೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ, ಗ್ಯಾರಂಟಿ ಯೋಜನೆಗಳೇ ನಿಜವಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಎಂಬ ಕನಿಷ್ಠ ಜ್ಞಾನವೂ ಟೀಕೆ ಮಾಡುವವರಿಗೆ ಇಲ್ಲದಿರುವುದು ವಿಷಾದನೀಯ ಎಂದು ತಿಳಿಸಿದ ಅವರು, ನಮ್ಮ ಸಂವಿಧಾನದ ಮುಖ್ಯ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವುದು ಅತ್ಯಗತ್ಯ. ಇದೇ ಕಾರಣಕ್ಕಾಗಿ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‍ನಲ್ಲಿ ಘೋಷಿಸಿದ 5,300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡದೆ ರಾಜ್ಯಕ್ಕೆ ದ್ರೋಹ ಎಸಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಭದ್ರಾ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ನಿರ್ಮಾಣದ ಹಿಂದೆ ಮಾಜಿ ಸಚಿವ ಶ್ರೀನಿವಾಸ್ ಅವರ ಶ್ರಮವಿದೆ. ಹಿಂದೆ ತಾನು ಸಕ್ರ್ಯೂಟ್ ಹೌಸ್ ಉದ್ಘಾಟನೆಗೆ ಬಂದಾಗ, ಅವರು ಮೈಸೂರು ಮಹಾರಾಜರ ಕಾಲದ ಇತಿಹಾಸವನ್ನು ನೆನಪಿಸಿ ಈ ಭಾಗಕ್ಕೆ ಸೇತುವೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸತತ ಬೆನ್ನಟ್ಟುವಿಕೆಯಿಂದ ಇಂದು ಸುಮಾರು 35 ಕೋಟಿ ರೂ. ವೆಚ್ಚದ ಈ ಯೋಜನೆ ಸಾಕಾರಗೊಂಡಿದೆ ಎಂದು ಶ್ಲಾಘಿಸಿದರು.
ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಹಾಗೂ ರೈತರು ಭೂಮಿ ಬಿಟ್ಟುಕೊಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, 5,300 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರದ ನಾಲ್ಕು ಬಜೆಟ್‍ಗಳು ಕಳೆದರೂ ಒಂದು ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ. ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಈ ಭಾಗದಲ್ಲಿ ‘ಬ್ಯಾರೇಜ್ ಕಮ್ ಬ್ರಿಡ್ಜ್’ ನಿರ್ಮಿಸಿಕೊಡುವಂತೆ ಕೇಳಿರುವ ಸಾರ್ವಜನಿಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ಬರಬೇಕಿದ್ದ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಅಷ್ಟೇ ಅಲ್ಲದೆ, ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂ. ಹಾಗೂ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿಗೆ ಘೋಷಿಸಿದ್ದ 3,000 ಕೋಟಿ ರೂ. ಸೇರಿದಂತೆ ಒಟ್ಟು 11,495 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಇದು ಕನ್ನಡಿಗರಿಗೆ ಮತ್ತು ನರಸಿಂಹರಾಜಪುರದ ಜನತೆಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದ ಅವರು, ಜನತೆ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಜಿಲ್ಲೆಯ ಸವಾರ್‍ಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 41 ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಈ ಪೈಕಿ 31 ಸೇತುವೆಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಬಾಕಿ ಉಳಿದಿರುವ 10 ಸೇತುವೆಗಳ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗಾಗಿ ಸರ್ಕಾರವು ದೊಡ್ಡ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 6.10 ಕೋಟಿ ರೂಪಾಯಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆಗಾಗಿ 16 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ, ರಾಜ್ಯ ಹೆದ್ದಾರಿಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ 7.5 ಕೋಟಿ ರೂಪಾಯಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮೂರು ಸೇತುವೆಗಳಿಗಾಗಿ 10.40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಕ್ಷೇತ್ರದ ವಿವಿಧ ಭಾಗಗಳಲ್ಲಿ 2.80 ಕೋಟಿ ರೂಪಾಯಿ ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಅವರು, ನೂತನ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 2,000 ಕೋಟಿ ರೂಪಾಯಿಗಳ ಅನುದಾನದಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ 50 ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಘೋಷಿಸಿದರು. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ನಮ್ಮ ಸರ್ಕಾರ ಜೀವ ತುಂಬುತ್ತಿದೆ ಎಂದು ಹೇಳಿದರು.
ಇಂದನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು 2013 ರಿಂದ 2018 ರವರೆಗಿನ ಅವಧಿಯಲ್ಲಿಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿತ್ತು. ಈಗಿನ ಐದು ಗ್ಯಾರಂಟಿ ಯೋಜನೆಗಳ ಹಿಂದೆ ರಾಹುಲ್ ಗಾಂಧಿ ಅವರ ಆಶಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಶ್ರಮವಿದೆ. ಕೋವಿಡ್ ನಂತರದ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮಹಿಳೆಯರು ಮತ್ತು ಬಡವರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಸ್ಮರಿಸಿದರು.
ಸಿದ್ದರಾಮಯ್ಯ ಅವರು ಹಣಕಾಸಿನ ಶಿಸ್ತಿನೊಂದಿಗೆ ಬಜೆಟ್‍ನಲ್ಲಿ ಸೂಕ್ತ ಅನುದಾನ ಮೀಸಲಿರಿಸಿ ಈ ಯೋಜನೆಗಳನ್ನು ಯಶಸ್ವಿಗೊಳಿಸಿದ್ದಾರೆ. ಇಂಧನ ಇಲಾಖೆಯೊಂದರಲ್ಲೇ ಸುಮಾರು 2.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ಸುಮಾರು 10,000 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಸರ್ಕಾರ ಭರಿಸುತ್ತಿದೆ. ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳಿಂದ ಇಂದು ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 5,000 ರೂಪಾಯಿಗಳಷ್ಟು ಆರ್ಥಿಕ ನೆರವು ಸಿಗುತ್ತಿದೆ. ಇದರಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದು, ರಾಜ್ಯದ ತಲಾ ಆದಾಯ ಹೆಚ್ಚಳವಾಗಲು ಈ ಯೋಜನೆಗಳು ಪೂರಕವಾಗಿವೆ ಎಂದು ಸಚಿವರು ವಿವರಿಸಿದರು.



