ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ಜೀವರಾಜ್‌ಗೆ ಪ್ರಮಾಣವಚನ ಬೋಧಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಮುನಿರಾಜು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಶೃಂಗೇರಿ ಶಾರದಾಂಬೆ ಮತ್ತು ಭಗವಂತನ ಹೆಸರಿನಲ್ಲಿ ಜೀವರಾಜ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಬಿಜೆಪಿ ಶಾಸಕರಿಗೆ ಬೊಕ್ಕೆ, ವಿಧಾನಸಭೆ ನಡಾವಳಿಗಳ ಪುಸ್ತಕ ನೀಡಿದ ಸ್ಪೀಕರ್ ಖಾದರ್ ನೀಡಿ ಅಭಿನಂದಿಸಿದರು. ಆರ್.ಅಶೋಕ್ ಅವರು ಹಾರ, ಪೇಟೆ ಹಾಕಿ ಶಾಸಕರನ್ನು ಸನ್ಮಾನಿಸಿದರು.
ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ರಾಜೇಗೌಡ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯ ಜೀವರಾಜ್ ಅವರು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಕ್ಷೇತ್ರದ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಗೆ ಕೋರ್ಟ್ ಆದೇಶ ಹೊರಡಿಸಿತು. ಮರು ಎಣಿಕೆಯಲ್ಲಿ ಜೀವರಾಜ್ ಅವರಿಗೆ ಬಹುಮತ ಬಂದು ಅಚ್ಚರಿಯ ಫಲಿತಾಂಶ ಹೊರಹೊಮ್ಮಿತ್ತು. ಕೊನೆಗೆ ಜೀವರಾಜ್ ಅವರಿಗೆ ಚುನಾವಣಾಧಿಕಾರಿಗಳು ಪ್ರಮಾಣಪತ್ರ ನೀಡಿದರು.
ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಇದೀಗ ಜೀವರಾಜ್ ಅವರು ಶೃಂಗೇರಿ ಕ್ಷೇತ್ರದ ಶಾಸಕರಾಗಿ ತಮ್ಮ ಕಾರ್ಯಾರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಎಂಟು ವರ್ಷಗಳ ನಂತರ ವಿಧಾನಸಭೆಯ ಮೆಟ್ಟಿಲೇರಿದ್ದಾರೆ.



