ಮೂಡಿಗೆರೆ ತಾಲ್ಲೂಕಿನ ಮೇಕನಗದ್ದೆ ಗ್ರಾಮದ ಶ್ರೀ ಕುಮಾರಸ್ವಾಮಿ ಹಾಗೂ ಚೌಡೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮೇ 2ರಿಂದ 4ರವರೆಗೆ ವಿಜೃಂಭಣೆಯಿಂದ ನೆರವೇರಿತು.
ಮೇ 2ರಂದು ಶನಿವಾರ ರಕ್ಷೋಘ್ನಹೋಮ, ವಾಸ್ತು ಪೂಜೆ, ವಾಸ್ತುಬಲಿ, ಬಿಂಬಶುದ್ಧಿ, ಕಲಶಾಧಿವಾಸ, ಶಕ್ತಿಹೋಮ ಮುಂತಾದ ಪೂಜಾ ಕಾರ್ಯಗಳು ನೆರವೇರಿದವು.
ಮೇ 3ರಂದು ಭಾನುವಾರ ಅಷ್ಟಬಂಧಲೇಪನ, ಗಣಪತಿ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಅಭಿಷೇಕ, ಚೌಡೇಶ್ವರಿ ಪ್ರತಿಷ್ಠೆ, ಕಲಶಾಭಿಷೇಕ, ಭದ್ರಕ ಮಂಡಲ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಮೇ 4ರಂದು ನಮಗ್ರಹ ಹೋಮ, ಮೃತ್ಯುಂಜಯರುದ್ರಯೋಗ, ಬ್ರಹ್ಮಕಲಶಾಭಿಷೇಕ, ಅಶ್ಲೇಷ ಬಲಿ, ಮಹಾಪೂಜೆ ನಂತರ ಅನ್ನಸಂತರ್ಪಣೆ ನೆರವೇರಿತು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನಿವೃತ್ತ ಅರಣ್ಯ ಅಧಿಕಾರಿ ಬೋಬೇಗೌಡ ಅವರು ರಚಿಸಿರುವ “ಬೋರಯಾನ” ಕೃತಿಯ ಲೋಕಾರ್ಪಣೆ ನೆರವೇರಿಸಲಾಯಿತು.
ಕೃತಿಯನ್ನು ಗ್ರಾಮದ ಹಿರಿಯರಾದ ಎಂ.ಬಿ. ಲಕ್ಷ್ಮಣಗೌಡ ಬಿಡಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ. ದಿನೇಶ್ ಅವರು ಮಾತನಾಡಿ ; ಮೇಕನಗದ್ದೆ ಗ್ರಾಮ ಬಹು ಹಿಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವಂತಹುದು, ಇಲ್ಲಿನ ಜನರು ವಿಶಿಷ್ಟ ಪ್ರತಿಭಾವಂತರು, ಕಲೆ ಸಾಹಿತ್ಯ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವಂತವರು ಎಂದರು. ನಮ್ಮ ಹಿಂದೂ ಪರಂಪರೆಯಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಒಂದು ವೈಜ್ಞಾನಿಕ ಹಿನ್ನಲೆಯಿದೆ. ಅದನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಬಹಳ ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಟ್ಟರು.



