ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆಯಡಿ ಕಾಫಿ ತೋಟಗಳ ಆನ್ ಲೈನ್ ಹರಾಜು ಪ್ರಕ್ರಿಯೆಯನ್ನು ತಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಹಳಸೆ ಶಿವಣ್ಣ ತಿಳಿಸಿದರು.
ಅವರು ಮಂಗಳವಾರ ಚಿಕ್ಕಮಗಳೂರಿನ ಮಲ್ಲೇನಹಳ್ಳಿಯ ಗಿರಿ ಸ್ಫೋಟ್ರ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಯುವ ಪ್ರದೇಶಗಳಾದ ಹಾಸನ, ಚಿಕ್ಕಮಗಳೂರು, ಕೊಡಗು ಈ ಮೂರು ಜಿಲ್ಲೆಗಳ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರೊಂದಿಗೆ ಇಬ್ಬರು ಬೆಳೆಗಾರ ಸಂತಸ್ಥರ ನಿಯೋಗ ಹೋಗಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದು ನಮ್ಮ ಮನವಿಯನ್ನು ಕೇಂದ್ರ ವಾಣಿಜ್ಯ ಸಚಿವರು ಸ್ವೀಕರಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸದ್ಯದಲ್ಲೆ ಈ ಬಗ್ಗೆ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಹೊರಬೀಳಲಿದೆ ಎಂದು ತಿಳಿಸಿದರು.
ಸರ್ಫೇಸಿ ಕಾಯ್ದೆಯಿಂದ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಕುರಿತು ಸಚಿವ ಹೆಚ್.ಡಿ ಕುಮಾರಸ್ವಾಮಿ ರವರು ಪತ್ರಕಾಗೊಷ್ಠಿ ನೆಡೆಸಿ ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಸುಪ್ರಿಮ್‍ಕೋರ್ಟ್‍ಗೆ ಅಫಿಡವಿಟ್ ಹಾಕಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಭೆಗೆ ವಿವರಿಸಿದರು.
ಸಂಘದ ಮಾಜಿ ಅಧ್ಯಕ್ಷ ಬಿ.ಎಸ್ ಜಯರಾಮ್ ಮಾತನಾಡಿ ವಾಣಿಜ್ಯ ಸಚಿವರ ಆಪ್ತ ಕಾರ್ಯದರ್ಶಿಗಳು ಮತ್ತು ಡಿಸಿಎಫ್ ರವರು ನಮ್ಮ ಮನವಿಯನ್ನು ಸ್ವೀಕರಿಸಿ ಕೇಳಿದರು, ಬೆಳೆಗಾರರ ಸಂಘಟನೆಗಳು ಇದುವರೆಗೆ ಯಾಕೆ ಪಿಐಎಲ್ ಹಾಕಿಲ್ಲ ಎಂದು ಪ್ರಶ್ನಿಸಿದರು, ಈ ಸಂಬಂಧ ಸುಪ್ರಿಮ್‍ಕೋರ್ಟ್ ಮತ್ತು ಹೈಕೋರ್ಟ್‍ನಲ್ಲಿ ದಾವೆ ಹೂಡಿದಾಗ ಸಮಸ್ಯೆ ಬಗೆಹರಿದು ತೀರ್ಪು ಹೊರಬರುತ್ತದೆ ಎಂದು ತಿಳಿಸಿದರು.
ಈ ಮೂರು ಜಿಲ್ಲೆಗಳ ಎಲ್ಲಾ ಬೆಳೆಗಾರರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಕೇಂದ್ರ ಅರ್ಥ ಸಚಿವರ ಬಳಿ ತಮಗಾಗುತ್ತಿರುವ ಅನ್ಯಾಯ ಮತ್ತು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದ ಅವರು ಅರ್ಥ ಸಚಿವರು ರಾಜ್ಯದವರೆ ಆಗಿರುವುದರಿಂದ ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ಆಶಾಭಾವನೆಯನ್ನು ಹೊರಹಾಕಿದರು.
ಸರ್ಫೇಸಿ ಕಾಯ್ದೆಯಿಂದ ತೋಟದ ಬೆಳೆಗಳನ್ನು ಹೊರಗಿಡಬೇಕು, ಸಂಸದರು ಸೇರಿದಂತೆ ಸಮಬಂಧಿಸಿದ ವಾಣಿಜ್ಯ ಸಚಿವರು ಮತ್ತು ಅರ್ಥ ಸಚಿವರೊಂದಿಗೆ ಮಾತುಕತೆ ನೆಡೆಸಿ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕೆಂದು ಬೆಳೆಗಾರರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ರೈತ ಮತ್ತು ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವಿಜಯ್ ಕುಮಾರ್ ಮಾತನಾಡಿ ಡೀಮ್ಡ್ ಅರಣ್ಯದಲ್ಲಿ ಜನವಸತಿ ಮತ್ತು ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವಂತೆ 2025ರ ಮಾರ್ಚ್ ತಿಂಗಳ ಮಾಹೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಅದರಂತೆ ಅರಣ್ಯ ಇಲಾಖೆ 10 ಲಕ್ಷ ಹೆಕ್ಟೇರ್ ಗುರುತಿಸಿದ್ದು ಕಳೆದ ಬಿಜೆಪಿ ಸರ್ಕಾರದಲ್ಲಿ ಇದನ್ನು 3.40 ಲಕ್ಷ ಹೆಕ್ಟೇರ್‍ಗೆ ಇಳಿಸಲಾಯಿತು, ಇದರ ವ್ಯಾಪ್ತಿಯಿಂದ ಒತ್ತುವರಿ ದಾರರನ್ನು ಕೈಬಿಟ್ಟು ಹೊಸ ಪಟ್ಟಿ ಮಾಡಿ ಸಮಸ್ಯೆ ಮಾಡಬೇಡಿ ಎಂದು ಎಸ್‍ಐಟಿ ಮೂಲಕ ಜಂಟಿ ಸರ್ವೇ ನೆಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳು ಬೀದಿಗೆ ಬಂದು ಸರ್ವೇ ಮಾಡದೆ ಎಲ್ಲೋ ಕುಳಿತು ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಬಗ್ಗೆ ಒತ್ತುವರಿದಾರರು ಎಚ್ಚೆತ್ತುಕೊಳ್ಳಬೇಕು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರ ಸಮ್ಮುಖದಲ್ಲಿ ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯಗಳಾದ ಆಟದ ಮೈದಾನ, ರಸ್ತೆ, ಸ್ಮಶಾನ ಬಿಟ್ಟು ಉಳಿದದ್ದನ್ನು ಪಡೆಯಲಿ ಎಂದರು.
ಅರಣ್ಯ ನೈಜತೆ ಇಲ್ಲದ್ದನ್ನು ಕೈ ಬಿಡಬೇಕು, ಅರಣ್ಯ ಸ್ವರೂಪ ಇರುವ ಸರ್ಕಾರಿ ಭೂಮಿಯನ್ನು ತೆಗೆದುಕೊಳ್ಳಲು ಅವಕಾಶ ಇದೆ ಎಂದು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ ಸುರೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್, ಪುಟ್ಟಸ್ವಾಮಿ, ಯತೀಶ್, ಖಜಾಂಚಿ ಎಂ.ಕೆ ಸುಂದರೇಶ್, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಜೆ.ಎಂ ಮಿಥುನ್, ಮಾಜಿ ಖಜಾಂಚಿ ಐ.ಎಂ ಮಹೇಶ್ ಗೌಡ, ಮಾಜಿ ಅಧ್ಯಕ್ಷ ಎಂ.ಎಸ್ ಲಿಂಗಪ್ಪಗೌಡ, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್, ಟಿ.ಡಿ ಮಲ್ಲೇಶ್, ನಾರಾಯಣಗೌಡ, ಎಂ.ಬಿ ಸತೀಶ್, ಕೆರೆಮಕ್ಕಿ ಮಹೇಶ್, ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷ ಐ.ಎಂ ಮಿಥುನ್, ಕಾರ್ಯದರ್ಶಿ ಪ್ರದೀಪ್ ಕುಮಾರ್. ಎಂ.ಕೆ ದಿನೇಶ್, ಉಮೇಶ್ ಚಂದ್ರ, ಕೆ.ಕೆ.ಮನುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



