ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ನಡೆದು ಇದೀಗ ಕ್ಷೇತ್ರದ ಶಾಸಕರೇ ಬದಲಾಗಿದ್ದಾರೆ. ಇದು ರಾಜ್ಯದ ಮಾತ್ರವಲ್ಲ ದೇಶದ ಚುನಾವಣಾ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಮತ್ತು ವಿಚಿತ್ರ ಘಟನೆಯಾಗಿದೆ.
ಅತ್ಯಂತ ಮಹತ್ವ ಪಡೆಯಬೇಕಾಗಿದ್ದ ಮತ್ತು ವಿಸ್ತೃತ ಚರ್ಚೆಯಾಗಬೇಕಾಗಿದ್ದ ಈ ಬೆಳವಳಿಗೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಭರಾಟೆಯಲ್ಲಿ ಹೆಚ್ಚು ಸುದ್ದಿಯಾಗದೇ ಹೋಗಿದೆ. ನಿಜಕ್ಕೂ ಈ ಬೆಳವಣಿಗೆ ಪ್ರಜಾಪ್ರಭುತ್ವದ ಅಣಕವಾಗಿದ್ದು, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
2023 ರಲ್ಲಿ ನಡೆದ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿ.ಡಿ. ರಾಜೇಗೌಡ 59171 ಮತ ಪಡೆದು ವಿಜಯ ಗಳಿಸಿದ್ದರು.ಬಿಜೆಪಿಯ ಜೀವರಾಜ್ ಗಳಿಸಿದ್ದು 58970 ಮತಗಳು. ಗೆಲುವಿನ ಅಂತರ 201 ಮತಗಳು ಮಾತ್ರವಾಗಿತ್ತು.
ಆಗ ಚಲಾವಣೆ ಆದ ಅಂಚೆ ಮತಗಳು 1822.ಇದರಲ್ಲಿ ಜೀವರಾಜ್ 692 ಮತ ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು.ಆಗ 279 ಮತ ತಿರಸ್ಕೃತವಾಗಿದ್ದವು.
ಗೆಲುವಿನ ಅಂತರ ತಿರಸ್ಕೃತ ಮತಗಳಿಗಿಂತ ಕಡಿಮೆ ಇದ್ದರೆ ಮರು ಎಣಿಕೆ ಕೇಳಬಹುದು. ಅಂದು ಮತ ಎಣಿಕೆ ಸಂದರ್ಭದಲ್ಲಿ ಜೀವರಾಜ್ ಪರ ಚುನಾವಣಾ ಏಜೆಂಟರು ಮರು ಎಣಿಕೆ ಕೋರಿದರು. ಚುನಾವಣಾಧಿಕಾರಿ ನಿಯಮ ಮೀರಿ ಅದನ್ನು ತಿರಸ್ಕರಿಸಿ ರಾಜೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು.
ಇದರ ವಿರುದ್ಧ ಪರಾಜಿತ ಅಭ್ಯರ್ಥಿ ಜೀವರಾಜ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು.ಈ ಅರ್ಜಿ ವಿಚಾರಣೆ ನಡೆಸದೇ ವಜಾ ಮಾಡಬೇಕು ಎಂದು ರಾಜೇಗೌಡರು ನ್ಯಾಯಾಲಯವನ್ನು ಕೋರಿದರು. ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿತು. ಉಚ್ಛ ನ್ಯಾಯಾಲಯದ ಈ ತೀರ್ಮಾನವನ್ನು ರಾಜೇಗೌಡರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರು. ಅಲ್ಲಿ ಮತ್ತೆ ವಿಚಾರಣೆ ನಡೆದು ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಆದೇಶಿಸಿತು.
ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮರು ಎಣಿಕೆಗೆ ನ್ಯಾಯಾಲಯ ಆದೇಶಿಸಿತು. ಈ ತೀರ್ಪಿನ ವಿರುದ್ಧ ರಾಜೇಗೌಡ ಮತ್ತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಮತ್ತೆ ವಿಚಾರಣೆ ನಡೆದು ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು.
ಕಳೆದ ಏಪ್ರಿಲ್ 6 ರಂದು ಪುನಃ ಮರು ಎಣಿಕೆ ಆದೇಶಕ್ಕೆ ರಾಜೇಗೌಡರು 2 ವಾರಗಳ ತಡೆಯಾಜ್ಞೆ ಪಡೆದರು. ತಡೆಯಾಜ್ಞೆ ಅವಧಿ ಮುಗಿದ ನಂತರ ಮೇ 2 ರಂದು ಮರು ಎಣಿಕೆ ಚಿಕ್ಕಮಗಳೂರು ಐ ಡಿ ಎಸ್ ಜಿ ಕಾಲೇಜಿನಲ್ಲಿ ನಡೆಯಿತು. ಅಂದು ತಿರಸ್ಕೃತ ಮತಗಳನ್ನು ಮರುಎಣಿಕೆ ಮಾಡಿದಾಗ ಅದರಲ್ಲಿ ರಾಜೇಗೌಡರು ಎರಡು ಮತಗಳನ್ನು ಹೆಚ್ಚುವರಿಯಾಗಿ ಪಡೆದರು.ಇದನ್ನು ರಾಜೇಗೌಡರ ಗೆಲುವು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಸಹ ಮಾಡಿದರು.
ನಂತರ ರಾಜೇಗೌಡರಿಗೆ ಬಂದ ಮತ ಪರಿಶೀಲನೆ ಮಾಡಿದಾಗ ಹೊಸತಾಗಿ 255 ಮತ ತಿರಸ್ಕೃತ ಆಯಿತು. ಹಾಗೆಯೇ ಡಿ.ಎನ್. ಜೀವರಾಜ್ ಅವರಿಗೆ ಬಂದ ಮತಗಳನ್ನು ಪರಿಶೀಲನೆ ಮಾಡಿದಾಗ 2 ಮತಗಳು ತಿರಸ್ಕೃತಗೊಂಡವು. ಈ ಮತಪತ್ರಗಳಲ್ಲಿ ಮತದಾರರು ಈರ್ವರಿಗೆ ಮತ ಚಲಾಯಿಸಿದ್ದರು, ಮರು ಎಣಿಕೆಯಲ್ಲಿ 255 ಮತ ಕಳೆದುಕೊಂಡ ರಾಜೇಗೌಡರು ಒಟ್ಟಾರೆಯಾಗಿ 52 ಮತಗಳಿಂದ ಹಿನ್ನಡೆ ಕಂಡರು. ಇದೀಗ ಶಾಸಕ ಸ್ಥಾನವನ್ನು ಕಳೆದುಕೊಂಡರು.
ಮೇ 2 ರಂದು ಮರು ಎಣಿಕೆ ಸಂದರ್ಭದಲ್ಲಿ ಮತಪತ್ರ ಇಟ್ಟ ಕೊಠಡಿ ಭದ್ರತೆ ಸಾಲದು, ಅಲ್ಲಿ ದಾಖಲೆಗಳನ್ನು ಇಟ್ಟ ಟ್ರಂಕ್ ಗೆ ಬೀಗ ಹಾಕಿಲ್ಲ, ಮತ ಟ್ಯಾಂಪರಿಂಗ್ ಆಗಿದೆ ಎಂದೆಲ್ಲಾ ಕಾಂಗ್ರೇಸ್ ನಾನಾ ರೀತಿಯ ತಕರಾರು ಮಾಡಿತು. ಕಡೆಗೆ ಚುನಾವಣೆ ಅಧಿಕಾರಿ ಮತ ಪತ್ರಗಳನ್ನು ಇಟ್ಟ ಬಾಕ್ಸ್ ಸುಸ್ಥಿತಿಯಲ್ಲಿ ಇರುವುದು ಮತ್ತು ಅವುಗಳು ಸೀಲ್ ಆಗಿರುವುದು ತೋರಿಸಿದ ಮೇಲೆ ಅವುಗಳನ್ನು ಎಣಿಕೆ ಸ್ಥಳಕ್ಕೆ ಸಾಗಿಸಲು ಒಪ್ಪಿಗೆ ನೀಡಿದ್ದು. ಎಣಿಕೆ ನಂತರ ಸೋಲುಂಡ ಅಭ್ಯರ್ಥಿ ಟಿ.ಡಿ. ರಾಜೇಗೌಡರ ಚುನಾವಣಾ ಏಜೆಂಟ್ ಪೊಲೀಸ್ ಠಾಣೆಯಲ್ಲಿ ವಿಜೇತ ಅಭ್ಯರ್ಥಿ ಮೇಲೆ ಹಾಗೂ ಅಂದಿನ ಅಧಿಕಾರಿಗಳ ಮೇಲೆ ಮತಪತ್ರ ತಿರುಚಿದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.
ಈ ಬೆಳವಣಿಗೆ ಹಲವಾರು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ. ಅಂದು ಸ್ವೀಕೃತಗೊಂಡಿದ್ದ 257 ಮತಗಳು ಮರ ಎಣಿಕೆಯಲ್ಲಿ ತಿರಸ್ಕೃತಗೊಂಡಿವೆ. ಇವುಗಳಲ್ಲಿ ಟಿ.ಡಿ. ರಾಜೇಗೌಡರಿಗೆ ಬಂದಿದ್ದ 255 ಮತಗಳು ತಿರಸ್ಕೃತಗೊಂಡಿವೆ. ಈ ಎಲ್ಲಾ ಮತಗಳು ಡಬಲ್ ಎಂಟ್ರಿ ಎಂದು ತಿರಸ್ಕೃತಗೊಂಡಿವೆ. ಹಾಗಾದರೆ 2023ರಲ್ಲಿ ಇವುಗಳನ್ನು ಎಣಿಕೆ ಮಾಡುವಾಗ ಇದ್ದ ಚುನಾವಣಾ ಏಜೆಂಟರು ಇದನ್ನು ಗಮನಿಸಿರಲಿಲ್ಲವೇ ? ಇಷ್ಟು ದೊಡ್ಡ ಸಂಖ್ಯೆಯ ತಿರಸ್ಕೃತ ಮತಗಳನ್ನು ಟಿ.ಡಿ.ರಾಜೇಗೌಡರ ಪರವಾಗಿ ಎಣಿಕೆ ಮಾಡಿ ಹಾಕಿದಾಗ ಎದುರು ಅಭ್ಯರ್ಥಿಗಳ ಏಜೆಂಟರು ಏನು ಮಾಡುತ್ತಿದ್ದರು ? ಅಂಚೆ ಮತಗಳು ಸರ್ಕಾರಿ ಅಧಿಕಾರಿಗಳು, ಶಿಕ್ಷಕರ ಮತಗಳಾಗಿದ್ದು ಅವರು ಹೇಗೆ ಡಬಲ್ ಎಂಟ್ರಿ ಮಾಡಿದರು. ಅವರೆಲ್ಲಾ ಅಷ್ಟು ದಡ್ಡರಾಗಿದ್ದರೇ ?
ಈಗ ಮರು ಎಣಿಕೆಯಿಂದ ಬಂದ ಫಲಿತಾಂಶದ ಪ್ರಕಾರ ಕಳೆದ ಮೂರು ವರ್ಷಗಳಿಂದ ಶಾಸಕ ಸ್ಥಾನದಲ್ಲಿ ಇರಬೇಕಾಗಿದ್ದ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಅದರಿಂದ ವಂಚಿತರಾಗಿದ್ದಕ್ಕೆ ಆಗಿರುವ ನಷ್ಟ ಮತ್ತು ನೋವನ್ನು ಭರಿಸಕೊಡುವವರು ಯಾರು ? ತಪ್ಪು ಲೆಕ್ಕಾಚಾರದಿಂದ ಮೂರು ವರ್ಷಗಳಿಂದ ಶಾಸಕ ಸ್ಥಾನ ಅನುಭವಿಸಿದ ಮತ್ತು ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅನುಭವಿಸಿದ ಟಿ.ಡಿ. ರಾಜೇಗೌಡರಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಭರಿಸಿಕೊಡುವವರು ಯಾರು ?
ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಆರೋಪಿಸುತ್ತಿರುವಂತೆ ಅಂದೇ ತಿರಸ್ಕೃತವಾಗಿದ್ದ ಮತಗಳ ಬಂಡಲ್ ಬಂಡಲ್ ಗಳನ್ನೇ ರಾಜೇಗೌಡರ ಪರವಾಗಿ ಹಾಕಿ ಅವರು ಗೆಲ್ಲುವಂತೆ ನೋಡಿಕೊಳ್ಳಲಾಯಿತು ಎಂದು. ಅಷ್ಟು ರಾಜಾರೋಷವಾಗಿ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದಾದರೇ ಅವರ ಮೇಲೆ ಪ್ರಭಾವ ಬೀರಿದ್ದು ಯಾರು ? ನಿಜಕ್ಕೂ ಅಂದು ಪಿತೂರಿ ನಡೆಸಲಾಗಿತ್ತೇ ? ಕಾಂಗ್ರೇಸ್ ರಾಜ್ಯದಲ್ಲಿ ಬಹುಮತ ಪಡೆಯುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆ ಅಧಿಕಾರಿಗಳು ಕಾಂಗ್ರೇಸ್ ಪರವಾಗಿ ವರ್ತಿಸಿದರೆ ? ಮರು ಎಣಿಕೆ ಕೋರಿ ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದಾಗ ರಾಜೇಗೌಡರು ಪದೇ ಪದೇ ತಡೆಯಾಜ್ಞೆ ತರಲು ಪ್ರಯತ್ನಿಸಿದ್ದು ಯಾಕೆ ?
2023ರಲ್ಲಿ ಎಣಿಕೆ ಕಾರ್ಯ ನಡೆಸಿದ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ನೀಡುವವರು ಯಾರು ? ನಿಜಕ್ಕೂ ಅಂದಿನ ಮತ ಎಣಿಕೆಯಲ್ಲಿ ಅಕ್ರಮ ನಡೆಸಲಾಗಿದೆಯೇ ? ಪ್ರಭಾವ ಬೀರಲಾಗಿದೆಯೇ ? ಅಷ್ಟು ಮತಗಳು ಡಬಲ್ ಎಂಟ್ರಿ ಆಗಿರುವುದು ಹೇಗೆ ? ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ತನಿಖೆಯಿಂದ ಉತ್ತರ ಕಂಡುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪ್ರಜಾಪ್ರಭುತ್ವಕ್ಕೆ ಅಣಕವಾಗಿರುವ ಈ ಘಟನೆಗೆ ಸೂಕ್ತ ಉತ್ತರಗಳನ್ನು ಜನರಿಗೆ ನೀಡಲೇ ಬೇಕು.
- ಪ್ರಸನ್ನ ಗೌಡಹಳ್ಳಿ, ಸಂಪಾದಕ, ಚಿಕ್ಕಮಗಳೂರು ದರ್ಪಣ ಪತ್ರಿಕೆ



