ಫಾರಂ ನಂಬರ್ 53ರಲ್ಲಿ ಭೂಮಿಯ ಹಕ್ಕು ಪತ್ರ ರದ್ದಾಗಿರುವ ಬಗ್ಗೆ ಕಾನೂನು ಹೋರಾಟ ರೂಪಿಸಲು ಕಳಸ ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಳಸ ರೈತ ಹಿತರಕ್ಷಣಾ ವೇದಿಕೆಯು ಪಟ್ಟಣದಲ್ಲಿ ಭಾನುವಾರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ಮಾತನಾಡಿ ; ಕಳೆದ 2 ದಶಕಗಳಿಂದ ಫಾರಂ ನಂಬರ್ 53ರಲ್ಲಿ ನೂರಾರು ರೈತರಿಗೆ ಭೂಮಿಯ ಹಕ್ಕು ನೀಡಲಾಗಿತ್ತು. ಇದನ್ನು ಕಾನೂನು ಬದ್ಧವಾಗಿ ಆಯಾ ಕಾಲದ ಶಾಸಕರ ನೇತೃತ್ವದ ಸಮಿತಿ ಶಿಫಾರಸ್ಸಿನ ಮೇಲೆಯೇ ಮಾಡಲಾಗಿದೆ. ಹೀಗೆ ಕಾನೂನು ಬದ್ಧವಾಗಿಯೇ ಮಂಜೂರಾದ ಭೂಮಿಯ ಹಕ್ಕನ್ನು ಏಕಾಏಕಿ ರದ್ದುಪಡಿಸಿರುವುದು ಕಾನೂನಿನ ಪ್ರಕಾರ ಸರಿಯಲ್ಲ, ರೈತರು ತಮಗೆ ಮಂಜೂರಾಗಿದ್ದ ಭೂಮಿಯಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಸಿದ್ದ ರೈತರಿಗೆ ಫಸಲು ಕೈಗೆ ಬರುವ ಸಂದರ್ಭದಲ್ಲಿ ಭೂಮಿ ಬಿಡಲು ಆದೆಶ ಮಾಡಲಾಗುತ್ತಿದೆ. ಹಾಗೆಯೇ ಈ ಜಮೀನಿನ ಮೇಲೆ ಬ್ಯಾಂಕ್ ಸಾಲ ಮಾಡಲಾಗಿದೆ. ಕುಟುಂಬದ ನಡುವೆ ಜಮೀನು ಹಿಸ್ಸೆ ಮಾಡಿಕೊಳ್ಳಲಾಗಿದೆ. ಈಗ ಏಕಾಏಕಿ ಭೂಮಿ ಹಕ್ಕನ್ನು ಕಸಿದುಕೊಂಡು ರೈತರನ್ನು ಬೀದಿಗೆ ಬರುವಂತೆ ಮಾಡಿದೆ ಎಂದರು. ಇಡೀ ರಾಜ್ಯದಲ್ಲೇ ಇಂತಹ ಸಾವಿರಾರು ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಕಡೂರು, ಮೂಡಿಗೆರೆ, ಕಳಸ ತಾಲ್ಲೂಕಿನಲ್ಲಿ ಮಾತ್ರ ಹಕ್ಕುಪತ್ರ ರದ್ದು ಮಾಡಲಾಗಿದೆ ಎಂದರು.
ಕಳಸ ಸಹಕಾರ ಸಂಘದ ಅಧ್ಯಕ್ಷ ಹಿರಿಯ ಮುಖಂಡ ಜಿ.ಕೆ. ಮಂಜಪ್ಪಯ್ಯ ಮಾತನಾಡಿ, ಕಳಸ ತಾಲ್ಲೂಕಿನ ರೈತರಿಗೆ ಮಂಜೂರಾದ ಹಕ್ಕುಪತ್ರಗಳನ್ನು ಕೂಡ ರದ್ದು ಮಾಡಲಾಗಿದೆ. ಈ ಹಕ್ಕುಪತ್ರಗಳ ಆಧಾರದಲ್ಲಿ ಬ್ಯಾಂಕುಗಳು ಲಕ್ಷಗಟ್ಟಲೆ ಸಾಲ ಕೂಡ ಕೊಟ್ಟಿವೆ. ಆದ್ದರಿಂದ ಕಾನೂನು ಹೋರಾಟದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಕೆ.ಆರ್.ಪ್ರಭಾಕರ್ ಮಾತನಾಡಿ, ರೈತರ ಉಳಿವಿಗೆ ತುರ್ತು ಕ್ರಮ ಆಗಲೇಬೇಕು ಎಂದರು.ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಭೂಮಿ ಹಕ್ಕು ಕಳೆದುಕೊಂಡ ಕೆಲವು ರೈತರಿಗೆ ಹೈಕೋಟಿನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎಂಬುದು ಸಮಾಧಾನದ ಸಂಗತಿ. ಕರ್ನಾಟಕ ಆಡಳಿತ ಟ್ರಬ್ಯೂನಲ್ ನಲ್ಲಿ ಕೂಡ ಕೆಲವು ರೈತರಿಗೆ ತಡೆಯಾಜ್ಞೆ ಸಿಕ್ಕಿದೆ ಎಂದರು.
ವಕೀಲ ಅನಂತೇಶ್ ಮಾತನಾಡಿ, ಕೃಷಿಕರಿಂದ ಸಣ್ಣಪುಟ್ಟ ತಪ್ಪು ಆಗಿದೆ.ಆದರೆ ಎಲ್ಲ ಮಾಹಿತಿ ಇದ್ದ ಅಧಿಕಾರಿಗಳು ಯಾಕೆ ತಪ್ಪು ಮಾಡಿದರು ಎಂಬುದು ಯಕ್ಷಪ್ರಶ್ನೆ.ಭೂಕಂದಾಯ ಕಾಯ್ದೆಗೆ ಸರಿಯಾದ ತಿದ್ದುಪಡಿ ಮಾಡದೆ ಇರುವುದರಿಂದ ಬಹಳಷ್ಟು ಗೊಂದಲ ಆಗುತ್ತಿದೆ ಎಂದರು.
ಮುಖಂಡರಾದ ಕೆ.ಸಿ.ಧರಣೇಂದ್ರ, ವೆಂಕಟಸುಬ್ಬಯ್ಯ, ಕಲ್ಲಾನೆ ನರೇಂದ್ರ, ರಂಗನಾಥ್, ಮುಂತಾದವರು ಭಾಗವಹಿಸಿದ್ದರು.
ಮೇ 23 ರಂದು ಮೂಡಿಗೆರೆ ರೈತಭವನದಲ್ಲಿ ಹಮ್ಮಿಕೊಂಡಿರುವ ಬೃಹತ್ ರೈತ ಸಮಾವೇಶಕ್ಕೆ ಕಳಸ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದರು.



