ಶ್ರೀ ಪಾರ್ವತಿ ಮಹಿಳಾ ಮಂಡಳಿ ನೇತೃತ್ವದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಜ್ಯೋತಿನಗರ ಶ್ರೀಜ್ಯೋರ್ತಿಲಕ್ಷ್ಮಿಗಣಪತಿ ದೇವಸ್ಥಾನ ಮುಂಭಾಗದÀ ‘ಶ್ರೀ’ ನಿವಾಸದಲ್ಲಿಂದು ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಈ ಸಂದರ್ಭದಲ್ಲಿ ಮಾತನಾಡಿ ಆಚಾರ್ಯರ ತತ್ತ್ವಸಿದ್ಧಾಂತಗಳನ್ನು ಜನಮನಕ್ಕೆ ತಲುಪಿಸುವ ಹಿನ್ನಲೆಯಲ್ಲಿ ಕಳೆದ 9ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಂಡಳಿ ಪ್ರತಿವರ್ಷ ಪರಿಸರ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಶ್ರೀರಂಭಾಪುರಿ ಮಹಾಸಂಸ್ಥಾನ ಪೀಠದ ಲಾಂಛನ ಹಸಿರು ಆಗಿದ್ದು, ಪೃಥ್ವಿತತ್ತ್ವವನ್ನು ಸಾರುವ ಮೂಲಕ ಹಿಂದಿನಿಂದಲೂ ಪರಿಸರ ಜಾಗೃತಿ ಕಾರ್ಯಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಪಂಚಭೂತಗಳ ಆರಾಧನೆ ಸನಾತನ ಪರಂಪರೆಯಲ್ಲಿ ಅನೂಚಾನವಾಗಿ ನಡೆದುಬಂದಿದೆ. ದೇವರ ಕಾಡು, ಬನ. ಪವಿತ್ರವನ, ಸೊಪ್ಪಿನಬೆಟ್ಟ ಮತ್ತಿತರ ಹೆಸರಿನಲ್ಲಿ ಹಸಿರನ್ನು ಸಂರಕ್ಷಿಸುವ ಪದ್ಧತಿ ನಮ್ಮಲ್ಲಿತ್ತು. ಗಿಡ, ಮರ, ಬೆಟ್ಟ, ಗುಡ್ಡ, ನದಿತೊರೆಗಳು, ಪ್ರಾಣಿಪಕ್ಷಿಗಳು ಸೇರಿದಂತೆ ಸಮಸ್ತ ಭೂಮಂಡಲವನ್ನು ಸ್ವಚ್ಛವಾಗಿ ಇಟ್ಟುಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಹಿತಮಿತವಾಗಿ ಪರಿಸರದ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಂರಕ್ಷಣಾ ಕಾರ್ಯದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಪಾಲ್ಗೊಳ್ಳಬೇಕೆಂದರು.

ದಾವಣಗೆರೆಯ ಶಿವಮ್ಮಬಸವರಾಜಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಶೈಲಾಬಸವರಾಜು ಪರಿಸರಗೀತೆ ಹಾಡಿದರು. ಲೋಕಕಲ್ಯಾಣಾರ್ಥ ಅಧಿಕಜೇಷ್ಠಮಾಸದಲ್ಲಿ ಆಚರಿಸುವ 16 ಸೋಮಾವಾರದ ಶಂಭುಲಿಂಗ ವ್ರತದ ಉದ್ಯಾಪನೆ ಇದೇ ಸಂದರ್ಭದಲ್ಲಿ ನಡೆಯಿತು. ಸಾಮೂಹಿಕ ಶ್ರೀರುದ್ರ ಪಾರಾಯಣ, ಭಜನೆ ನಡೆಯಿತು. ಶಿಲ್ಪಾರಘು ಸ್ವಾಗತಿಸಿ, ನಮ್ರತಾ ವಂದಿಸಿದರು. ಅನಿತಾಹೇಮಂತ್ ಪ್ರಾರ್ಥಿಸಿದರು.
ಮಂಡಳಿ ಉಪಾಧ್ಯಕ್ಷೆ ಶೈಲಾಬಸವರಾಜು, ಸಂಘಟನಾಕಾರ್ಯದರ್ಶಿಗಳಾದ ರೇಖಾಪ್ರಸನ್ನ, ಸದಸ್ಯರಾದ ಮಂಜುಳಾಶಶಿಕುಮಾರ್, ಸಪ್ನಾಬಸವರಾಜು, ಲೀಲಾವಿಜಯಕುಮಾರ್, ಶೈಲಾಶಿವು, ಗೀತಾಬಸವರಾಜು, ಶೈಲಜಾ, ಶ್ಯಾಮಲಾ, ಜಯಾ, ಸುಧಾ, ಸುಮಾ, ಶಾಂತವಾಣಿ ಮತ್ತಿತರರು ಪಾಲ್ಗೊಂಡಿದ್ದರು.



