ananth 2

 

 

“ಕುಣಿಯಲಾರದವಳು ನೆಲಡೊಂಕು ಎಂದಂತೆ” ಎಂಬ ಮಾತಿನಂತೆ  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಹತಾಶೆಗೊಳಲಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರ ಎಂ.ಎಸ್. ಅನಂತು ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಬಿಜೆಪಿ ಮುಖಂಡ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ತಮ್ಮ ಹೇಳಿಕೆಯಲ್ಲಿ ಕಾಂಗ್ರೆಸ್‍ನವರು ಹೆಮ್ಮೆ ಪಡುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಮ್ಮೆಪಡುವುದು ಸಾಮಾನ್ಯ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಐವರು ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಿಜೆಪಿ, ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ಈ ಸೋಲಿನಿಂದ ರಾಜ್ಯದ ಇಡೀ ಬಿಜೆಪಿ ಗರ್ವಭಂಗ ಅನುಭವಿಸಿದೆ. ಸೋಲಿನ ಹತಾಶೆಯಿಂದ ನಿತ್ರಣಗೊಂಡಂತಾಗಿರುವ ಬಿಜೆಪಿಯವರು ತಮ್ಮ ಮಾನ ಮುಚ್ಚಿಕೊಳ್ಳಲು ಸದ್ಯ ಸತ್ಯಶೋಧನ ಸಮಿತಿ ರಚನೆ ಮಾಡಿ, ಬಿಜೆಪಿ ಅಡ್ಡಮತದಾನ ಆಗಿರುವ ಬಗ್ಗೆ ತನಿಖೆಗಿಳಿಸಿರುವುದು ಹಾಸ್ಯಾಸ್ಪದವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ವಿಧಾನ ಪರಿಷತ್ ಸೋಲಿನಿಂದ ದಿಗ್ಬ್ರಾಂತರಾದಂತಾಗಿದೆ. “ಕ್ರಾಸ್ ವೋಟಿಂಗ್ ಮಾಡಿದೋರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು”  ಅವರು ಹೇಳಿಕೆ ನೀಡಿದ್ದು, ಇದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ, ಅಲ್ಲದೇ ಬಿಜೆಪಿ, ಜೆಡಿಎಸ್ ಮೈತ್ರಿಯೂ ಹಳಸಿದೆ ಎಂಬುದನ್ನು ಜಗಜ್ಜಾಹೀರು ಮಾಡಿದೆ ಎಂದಿದ್ದಾರೆ.

ಕ್ರಾಸ್‍ವೋಟಿಂಗ್ ಬಗ್ಗೆ ಬಿಜೆಪಿಯ ಸತ್ಯಶೋಧನ ಸಮಿತಿ ಈಗಾಗಲೇ ವರದಿ ಸಿದ್ಧ ಪಡಿಸಿರುವ ಬಗ್ಗೆ ಮಾಹಿತಿ ಇದೆ. ಈ ವರದಿ ಬಹಿರಂಗಗೊಂಡಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಶರಣಾಗಿ ಕ್ಷಮೆ ಕೇಳುವ ದಿನ ದೂರವಿಲ್ಲ, ಬಿಜೆಪಿ ನಾಯಕರು ಸುಳ್ಳು ಅಪಪ್ರಚಾರ, ಟೀಕೆ ಬಿಟ್ಟು, ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಬೇಕು ಎಂದು ಅವರು ಕಿವಿ ಮಾತು ಹೇಳಿದ್ದಾರೆ.

ಎಂ.ಕೆ.ಪ್ರಾಣೇಶ್ ಅವರು ತಮ್ಮ ಪಕ್ಷದೊಳಗಿನ ಹುಳುಕು, ಒಡಕನ್ನು ಮೊದಲು ಸರಿಪಡಿಸಿಕೊಳ್ಳಬೇಕು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ನಾಯಕರು ಅಧಿಕಾರವಿಲ್ಲದೇ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಬಿಜೆಪಿಯವರ ಈ ಪ್ರಯತ್ನ ವ್ಯರ್ಥ ಪ್ರಯತ್ನವಾಗಿದೆ. ಏಕೆಂದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಸಿದ್ದರಾಮಯ್ಯ ಅವರ ದಕ್ಷ ಆಡಳಿತದಿಂದಾಗಿ ಜನ ಮೆಚ್ಚುಗೆ ಗಳಿಸಿದೆ. ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಿಂದಾಗಿ ರಾಜ್ಯದ ಜನತೆ ಕಾಂಗ್ರೆಸ್ ಸರಕಾರದ ಮೇಲೆ ಸಂಪೂರ್ಣ ಭರವಸೆ ಹೊಂದಿದ್ದು, ಬಿಜೆಪಿಯವರ ಅಪಪ್ರಚಾರಕ್ಕೆ ಜನತೆ ಕಿವಿಗೊಡುವುದಿಲ್ಲ, ಹಾಲಿ ಸಿಎಂ ಡಿಕೆಶಿ ಅವರು ಬಾಕಿ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಬಗ್ಗೆ ಈಗಾಗಲೇ ಭರವಸೆ ಮೂಡಿಸಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಸೋಲುವ ಮುನ್ಸೂಚನೆ ಬಿಜೆಪಿ ನಾಯಕರಿಗೆ ಸಿಕ್ಕಿದೆ. ಇದರಿಂದ ಇಡೀ ಬಿಜೆಪಿ ಪಟಾಲಂ ವಿಚಲಿತಗೊಂಡಿದೆ ಎಂದು ಟೀಕಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲ ಇದ್ದಿದ್ದು ನಿಜವಾದರೂ ಅದನ್ನು ಪಕ್ಷದ ರಾಷ್ಟ್ರೀಯ ನಾಯಕರಾದ ಸುಜ್ರೇವಾಲ ಅವರು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಿಎಂ ಸ್ಥಾನ ಬದಲಾವಣೆಯಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನೂ ಅವರು ಅತ್ಯಂತ ನಾಜೂಕಾಗಿ ಬಗೆಹರಿಸಿದ್ದಾರೆ. ಸುಜ್ರೇವಾಲ ಅವರ ಈ ನಡೆಗೆ ಬಿಜೆಪಿಯವರೇ ತಬ್ಬಿಬ್ಬಾಗಿದ್ದು, ಸುಜ್ರೇವಾಲರಂತಹ ನಾಯಕ ಬಿಜೆಪಿಗೆ ಬೇಕು ಎಂಬ ಮಾತು ಸ್ವತಃ ಬಿಜೆಪಿ ನಾಯಕರೇ ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ಶಿಸ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರದ ವಿರುದ್ಧವೂ ದೇಶದ ಜನತೆ ಹತಾಶರಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನೀಟ್‍ನಂತಹ ಪರೀಕ್ಷೆಯಲ್ಲೂ ಕೇಂದ್ರದ ಮಂತ್ರಿಗಳು ರಾಜಕೀಯ ಮಾಡಿ ಯುವಜನತೆಯ ಭವಿಷ್ಯ ಹಾಳು ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸರಕಾರ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಇದರ ವಿರುದ್ಧ ಯುವಜನತೆ ತಿರುಗಿ ಬಿದ್ದಿದ್ದರೂ ಕೇಂದ್ರದ ಮೋದಿ ಸರಕಾರ ಮಾತ್ರ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತಿರುವುದು ಯುವಜನರಿಗೆ ಮಾಡುತ್ತಿರುವ ದ್ರೋಹವಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ