ತಾಲೂಕಿನ ಜೇನುಬೈಲ್ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಬದಿಯಲ್ಲಿ ತನ್ನ ತಂದೆ ಅಕ್ರಮವಾಗಿ ವಾಣಿಜ್ಯ ಮಳಿಗೆ ಕಟ್ಟುತ್ತಿಲ್ಲವೆಂದು ಅವರ ಪುತ್ರ ಗೌತಮ್ ಹೊಯ್ಸಳಲು ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇನುಬೈಲ್ ಗ್ರಾಮದಲ್ಲಿ ತನ್ನ ತಂದೆ ಉದಯ ಅವರು 30 ವರ್ಷದ ಹಿಂದಿನ ಹಳೆ ಕಟ್ಟಡವನ್ನೇ ಹೊಸ ಮಾದರಿಯಲ್ಲಿ ದುರಸ್ತಿಪಡಿಸಿದ್ದಾರೆ. ಅದರಲ್ಲಿ ವಾಣಿಜ್ಯ ಮಳಿಗೆಗಳು ಇವೆ. ಕೂಗಳತೆ ದೂರದಲ್ಲಿರುವ ಕುಮಾರ್ ಎಂಬುವರು ದಿನಸಿ ಅಂಗಡಿ ಇಟ್ಟುಕೊಂಡಿದ್ದು, ನಮ್ಮ ಹೊಸ ಕಟ್ಟಡದಲ್ಲಿ ದಿನಸಿ ಅಂಗಡಿ ತೆರೆದರೆ ಕುಮಾರ್ ಅವರ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತನ್ನ ತಂದೆ ನಿರ್ಮಿಸಿರುವ ಕಟ್ಟಡ ಅಕ್ರಮವಾಗಿದೆ ಎಂದು ತಾರೇಶ್ ಅವರ ಸಹಾಯ ಪಡೆದು ತೊಂದರೆ ನೀಡುತ್ತಿದ್ದಾರೆ. ನಾವು ಅಕ್ರಮ ಕಟ್ಟಡ ಕಟ್ಟಿಲ್ಲ. ತಂದೆ ಹೆಸರಿನಲ್ಲಿ 1.14 ಎಕರೆ ಹಾಗೂ ಅಜ್ಜಿ ಹೆಸರಿನಲ್ಲಿ 4 ಎಕರೆ ಜಮೀನು ಇದೆ. ಇದು ಬಿಟ್ಟರೆ ಯಾವ ಅರಣ್ಯ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು.
ನಾಗೇಶ್‍ಗೌಡ ಜೇನುಬೈಲ್ ಮಾತನಾಡಿ, ಉದಯ್ ಅವರು ನಿರ್ಮಿಸಿರುವ ಕಟ್ಟಡದಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಇಬ್ಬರು ವ್ಯಕ್ತಿಗಳು ಮಾತ್ರ ವಯಕ್ತಿಕ ದ್ವೇಷದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರವಾಗಿ ಜೂ.19ರಂದು ಉದಯ್ ಮತ್ತು ತಾರೇಶ್ ನಡುವೆ ಕತ್ತಿ, ದೊಣ್ಣೆ ಹಿಡಿದು ಪರಸ್ಪರ ಬೈದಾಡಿಕೊಂಡಿದ್ದಾರೆಯೆ ಹೊರತು, ಹಲ್ಲೆ ನಡೆಸಿಲ್ಲ. ಆದರೆ ತಾರೇಶ್ ಅವರು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದಾರೆಂದು. ಉದಯ್ ಅವರು ಯಾವುದೇ ಅಕ್ರಮ ಕಟ್ಟಡ ಕಟ್ಟಿಲ್ಲ. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ. ಹಾಗೇನಾದರೂ ಇದ್ದರೆ ದಾಖಲೆ ಸಮೇತ ದೂರು ನೀಡಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ರಾಜಶೇಖರ್, ಸತೀಶ್‍ಗೌಡ ಉಪಸ್ಥಿತರಿದ್ದರು.


