ಸಮಾಜದ ಒಳಿತಿಗಾಗಿ ದೂರದೃಷ್ಟಿಯುಳ್ಳ ಆಡಳಿತಗಾರ, ಸಮಾಜಮುಖಿ ನಾಯಕ ಹಾಗೂ ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡರ ಜೀವನ ಚರಿತ್ರೆಯನ್ನು ಯುವ ಜನತೆ ತಿಳಿದುಕೊಳ್ಳಬೇಕೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಶನಿವಾರ ಮೂಡಿಗೆರೆ ಪಟ್ಟಣದ ಬಿಜಿಎಸ್ ಒಕ್ಕಲಿಗರ ಸಂಘ ಪಿಯು ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 517ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರನ್ನು ಯೋಜಿತ ನಗರವನ್ನಾಗಿ ರೂಪಿಸಿದರು. ಕೆರೆಗಳು, ಉದ್ಯಾನಗಳು, ದೇವಾಲಯಗಳು, ರಸ್ತೆಗಳನ್ನು ನಿರ್ಮಿಸಿ ಜನರ ಬದುಕು ಸುಧಾರಿಸುವ ಕಾರ್ಯ ಮಾಡಿದ್ದರಿಂದ ಇಂದು ಅತಿವೃಷ್ಟಿ, ಅನಾವೃಷ್ಟಿ ಬಂದರೂ ಬೆಂಗಳೂರಿನ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಕೆಂಪೇಗೌಭಡ ಸೇರಿದಂತೆ ಈ ನಾಡಿನ ಹಿತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಮಾತನಾಡಿ, ಕೆಂಪೇಗೌಡರು ಉತ್ತಮ ಆಡಳಿತ, ನ್ಯಾಯ, ಪ್ರಾಮಾಣಿಕತೆ ಮತ್ತು ಜನಸೇವೆಗೆ ಹೆಚ್ಚಿನ ಮಹತ್ವ ನೀಡಿದರು. ಅವರ ಆಡಳಿತ ನಮಗೆ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆ ಮತ್ತು ಜನಪರ ಆಡಳಿತದ ಮಹತ್ವವನ್ನು ತಿಳಿಸುತ್ತದೆ ಎಂದ ಅವರು, ನಮ್ಮ ಕೆಂಪೇಗೌಡ ಒಕ್ಕಲಿಗರ ವೇದಿಕೆಯಿಂದ ತಾಲೂಕಿನ ಜನರಿಗೆ ಅನುಕೂಲವಾಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕನಿಷ್ಟ 20 ಕಿ,ಮೀ ನಷ್ಟು ಇಂದನ ವೆಚ್ಚವನ್ನು ನಮ್ಮ ವೇದಿಕೆ ಬರಿಸುತ್ತದೆ. ಅದನ್ನು ತಾಲೂಕಿನ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರಕಾರಿ ಶಾಲೆ ವಿದ್ಯಾರ್ಥಿಗಳು ಹಾಗೂ ಆಂಬುಲೆನ್ಸ್ ಚಾಲಕನನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಆಂಬುಲೆನ್ಸ್ ಸಂಚಾರಕ್ಕೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಚಾಲನೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‍ಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ವಿಎಸ್ ಶಾಲೆ ಟ್ರಸ್ಟಿಗಳಾದ ಪುಣ್ಯಮೂರ್ತಿ, ವೆಂಕಟೇಶ್, ಸಾಹಿತಿ ಹಳೆಕೋಟೆ ರಮೇಶ್, ಪ್ರಬಾರ ಬಿಇಒ ಹೇಮಂತ್‍ಚಂದ್ರ, ಕಾಲೇಜು ಪ್ರಾಂಶುಪಾಲ ಸಂದೇಶ್, ಡಾ. ಅನಂತಪದ್ಮನಾಭ, ಶಿರಸ್ತೆದಾರ ರಘು, ಮಂಜುನಾಥ್ ಬೆಟ್ಟಗೆರೆ, ಪುಟ್ಟಸ್ವಾಮಿಗೌಡ, ಅಣ್ಣೇಗೌಡ, ರಾಹುಲ್‍ಗೌಡ, ಶೃತಿ ಮತ್ತಿತರರಿದ್ದರು.



