hdr
ಸೇವೆ ಮತ್ತು ಜಾಗತಿಕ ಶಾಂತಿ ರೋಟರಿ ಆಶಯ ಎಂದು ರೋಟರಿ3182 ಜಿಲ್ಲಾ ಮಾಜಿ ಗೌರ್ನರ್ ಡಿ.ಎಸ್.ರವಿ ಅಭಿಪ್ರಾಯಿಸಿದರು.
ಚಿಕ್ಕಮಗಳೂರು ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಎನ್.ಚಿದಾನಂದ ನೇತೃತ್ವದ 2026-27ನೆಯ ಸಾಲಿನ ಚಿಕ್ಕಮಗಳೂರು ರೋಟರಿಕ್ಲಬ್ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ಯುದ್ಧದ ವಾತಾವರಣ ಜಗತ್ತನ್ನು ತಲ್ಲಣಗೊಳಿಸಿದೆ. ಯುದ್ಧಗಳು ಹಿಂದಿನಿಂದಲೂ ನಡೆಯುತ್ತಲೇ ಬಂದಿರುವುದು ಇತಿಹಾಸ. ಹೊನ್ನು-ಹೆಣ್ಣು-ಮಣ್ಣಿಗಾಗಿ ಹಿಂದೆ ರಾಜರುಗಳು ಯುದ್ಧ ಮಾಡುತ್ತಿದ್ದರು. ನಂತರ ಸಾಮ್ರಾಜ್ಯವಿಸ್ತರಣೆಗೆ ಯುದ್ಧಗಳಾದವು. ಪ್ರಸ್ತುತ ಲಾಭಕ್ಕಾಗಿ -ಪಡೆದುಕೊಳ್ಳಲು-ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಯುದ್ಧ ನಡೆಯುತ್ತಿರುವುದು ಕಾಣುತ್ತಿದ್ದೇವೆ. ಇದರ ಪರಿಣಾಮ ಎಲ್ಲೆಡೆ ವ್ಯಾಪಕವಾಗಿದೆ. ಶಾಂತಿಯುತವಾದ ವಾತಾವರಣ ಕದಡಿದೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತಿನ ಶಾಂತಿ ಮುಖ್ಯ. ಅಂತರರಾಷ್ಟ್ರೀಯ ರೋಟರಿಸಂಸ್ಥೆ ವಿಶ್ವದಲ್ಲಿ ಶಾಂತಿ ನೆಲೆಸಬೇಕೆಂಬ ಹಿನ್ನಲೆಯಲ್ಲಿ ಶತಮಾನಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಪರಿಸರ ಸಂರಕ್ಷಣೆಗೂ ರೋಟರಿ ಆದ್ಯತೆ ನೀಡಿದೆ. ಜನಸಂಖ್ಯೆ ಸ್ಫೋಟ ಜೊತೆಗೆ ಸ್ವಾರ್ಥಕ್ಕಾಗಿ ನಿರಂತರವಾಗಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಅಭಿವೃದ್ಧಿಯೋಜನೆಗಳ ನೆಪದಲ್ಲಿ ಕಟ್ಟಡ, ರಸ್ತೆ, ಅಣೆಕಟ್ಟೆಗಾಗಿ ವಿಪರೀತ ಅರಣ್ಯನಾಶವಾಗಿದೆ. ಗಣಿಗಾರಿಕೆ ಬೆಟ್ಟ ಗುಡ್ಡಗಳನ್ನೂ ಉರುಳಿಸಿದೆ. ಹರಿಯುವ ನೀರನ್ನು ಕಲುಷಿತಗೊಳಿಸಿದ್ದೇವೆ. ಇವೆಲ್ಲದರ ಪರಿಣಾಮ ಜಾಗತಿಕ ತಾಪಮಾನ ವಿಪರೀತವಾಗಿ ಹೆಚ್ಚಿ ಆತಂಕದಾಯಕ ಸ್ಥಿತಿ ನಿರ್ಮಾಣ ಮಾಡಿದೆ. ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಪರಿಸರದ ಸಂರಕ್ಷಣೆ, ನೀರಿನ ಹಿತಮಿತವಾದ ಬಳಕೆಯನ್ನು ರೋಟರಿ ಪ್ರೋತ್ಸಾಹಿಸುತ್ತಲೇ ಬಂದಿದೆ ಎಂದವರು ವಿವರಿಸಿದರು.
ಹೊಸಚಿಗುರು ಹಳೆಬೇರು ಕೂಡಿರುವ ಮರ ಸೊಬಗು ಎಂಬಂತೆ ರೋಟರಿಯಲ್ಲಿ ಯುವಕರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹಿರಿಯರು ಮಾರ್ಗದರ್ಶನ ನೀಡುತ್ತಿದ್ದು ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಕ್ಲಬ್ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ವರದಿಯಿಂದ ಗೊತ್ತಾಗುತ್ತದೆ. ನಿಸ್ವಾರ್ಥವಾದ ಸೇವೆಯಲ್ಲಿ ಸಂತೃಪ್ತಿ ಸಿಗುತ್ತದೆ. ಹೆಚ್ಚೆಚ್ಚು ವೃತ್ತಿಪರರು ರೋಟರಿಆಂದೋಲನವನ್ನು ಸೇರಿ ಅಧಿಕ ಸೇವಾಕಾರ್ಯಗಳನ್ನು ಮಾಡುವಂತಾಗಬೇಕೆಂದು ರವಿ ಕರೆ ನೀಡಿದರು.
ಸಾಧನೆ ಮಾಡಲು ನಾಲ್ಕು ಮಂತ್ರಗಳಾದ ಪರಿಶ್ರಮ, ತಾಳ್ಮೆ, ನಿರಂತರ ಕಲಿಕೆ, ಒಳ್ಳೆಯ ಕನಸುಕಾಣುವುದು ಮುಖ್ಯವೆಂದು ಹಿಂದಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲಕಲಾಂ ಹೇಳುತ್ತಿದ್ದರೆಂದು ಉಲ್ಲೇಖಿಸಿದ ರವಿ, 68ವರ್ಷದ ಚಿಕ್ಕಮಗಳೂರು ರೋಟರಿಕ್ಲಬ್ ಜೀವನಸಂಧ್ಯಾ ವೃದ್ಧಾಶ್ರಮ ಸೇರಿದಂತೆ ಅನೇಕ ಜನಪರ ಕಾರ್ಯಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ರೋಟರಿ ಜಿಲ್ಲೆಯ ನಾಲ್ಕೈದು ಪ್ರತಿಷ್ಠಿತ ಹಾಗೂ ಹಿರಿಯ ಕ್ಲಬ್‍ಗಳಲ್ಲಿ ಇದೂ ಒಂದು ಎಂದರು.
ರೋಟರಿ ಫೌಂಡೇಶನ ಮೂಲಕ ಸೇವಾಕಾರ್ಯಗಳಿಗೆ ಆರ್ಥಿಕನೆರವು ನೀಡಲಾಗುತ್ತಿದೆ. ಕ್ಲಬ್ ನೀಡಿದ ಕೊಡುಗೆಗೆ ದುಪ್ಪಟ್ಟು ಹಣ ಸೇವಾಯೋಜನೆಗಳಿಗೆ ವಾಪಾಸ್ಸು ಬರುತ್ತಿದೆ ಎಂದ ಮಾಜಿಗೌರ್ನರ್ ಡಿ.ಎಸ್.ರವಿ ಇಲ್ಲಿಯ ಸದಸ್ಯರು ಅಂತರರಾಷ್ಟ್ರೀಯ ರೋಟರಿಗೆ ಉದಾರವಾಗಿ ಕೊಡುಗೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ನಿರೀಕ್ಷಿಸುವುದಾಗಿ ನುಡಿದರು.

ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ ಸಹಾಯಕಗೌರ್ನರ್ ಕಡೂರಿನ ಕೆ.ಬಿ.ದ್ವಾರಕನಾಥಬಾಬು ಸುರಕ್ಷಿತ ಸಂಚಾರ ಜಾಗೃತಿ ಸೇರಿದಂತೆ ಜಿಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ನಿರ್ಗಮಿತ ಅಧ್ಯಕ್ಷ ಎನ್.ಪಿ.ಲಿಖಿತ್ ಮತ್ತು ಕಾರ್ಯದರ್ಶಿ ಹರ್ಷಿತ್‍ಡಿ.ವಸಿಷ್ಠರನ್ನು ಸ್ಮರಣಿಕೆಯೊಂದಿಗೆ ಅಭಿನಂದಿಸಿದ ಮಾಜಿಅಧ್ಯಕ್ಷ ಕೆ.ಎಸ್.ರಮೇಶ್, ಯುವಜೋಡಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.
ನೂತನ ಅಧ್ಯಕ್ಷ ಎನ್.ಚಿದಾನಂದ ಮಾತನಾಡಿ ಕಿರಿಯವಯಸ್ಸಿನ ತಮಗೆ ಹಿರಿಯರೆಲ್ಲಾ ಸೇರಿ ದೊಡ್ಡ ಹೊಣೆಗಾರಿಕೆ ನೀಡಿರುವುದು ಸಂತೋಷದ ಸಂಗತಿ. ರೋಟರಿ ಅಪೇಕ್ಷೆಯಂತೆ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರ ಸಲಹೆ-ಸಹಕಾರ ಪಡೆದು ಉತ್ತಮ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗುವುದೆಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿಗಳನ್ನು ಎನ್.ಶ್ರೀವಾತ್ಸವ ಮತ್ತು ಚೇತನಕುಮಾರ್, ನೂತನ ಅಧ್ಯಕ್ಷ-ಕಾರ್ಯದರ್ಶಿಗಳನ್ನು ಎಂ.ಎಸ್.ಸುಧೀರ್ ಮತ್ತು ಎಂ.ಆರ್.ಕಿರಣ್ ಪರಿಚಯಿಸಿದರು. ನಿರ್ದೇಶಕರುಗಳಾದ ಟಿ.ಡಿ.ತಿಮ್ಮಯ್ಯ ಪ್ರಾರ್ಥಿಸಿದ್ದು, ಜಿಲ್ಲಾ ತಂಡದಲ್ಲಿರುವ ಕ್ಲಬ್ ಸದಸ್ಯರುಗಳನ್ನು ಫಣೀಂದ್ರನಾಡಿಗ್, ಹೊಸಸದಸ್ಯರನ್ನು ಬಿ.ಎಸ್.ವಿಧೇಯ, ಟಿ.ಆರ್.ಎಫ್.ಗೆ ಕೊಡುಗೆ ನೀಡಿದವರನ್ನು ಜಿ.ಎಲ್.ವೆಂಕಟೇಶಮೂರ್ತಿ ಪರಿಚಯಿಸಿದರು.
ನಿರ್ಗಮಿತ ಅಧ್ಯಕ್ಷ ಎನ್.ಪಿ.ಲಿಖಿತ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕೆ.ಎಸ್.ಆದರ್ಶ ವಂದಿಸಿದರು. ಕಾರ್ಯದರ್ಶಿ ವರದಿಯನ್ನು ಹರ್ಷಿತ್ ಡಿ.ವಸಿಷ್ಠ ಪವರ್‍ಪಾಯಿಂಟ್‍ನೊಂದಿಗೆ ಮಂಡಿಸಿದರು. ಅಂತರರಾಷ್ಟ್ರೀಯ ರೋಟರಿನಿಧಿಗೆ ಅತಿಹೆಚ್ಚು ಕೊಡುಗೆ ನೀಡಿದ ಶ್ರೀವಾತ್ಸವ್, ಎ.ಎಂ.ನಂಜುಂಡಸ್ವಾಮಿ, ಅನಂತೇಗೌಡ, ಎಂ.ಆರ್.ಕಿರಣ್, ಮಂಜುನಾಥ್ ಮತ್ತು ಎಐಟಿ ಪ್ರಾಂಶುಪಾಲ ಡಾ.ಗೌತಮ್‍ರನ್ನು ಅಭಿನಂದಿಸಲಾಯಿತು.



