ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣ ದಾಳಿಗೆ ಮತ್ತೊಂದು ಬಲಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ದೋಣಿಹಡ್ಲು ಗ್ರಾಮದ ರೈತ ಮಂಜುನಾಥ್ (45) ಎಂಬುವವರು ಕಾಡುಕೋಣ ದಾಳಿಯಿಂದ ಮೃತಪಟ್ಪಿದ್ದಾರೆ.
15 ದಿನಗಳ ಅಂತರದಲ್ಲಿ ಇಂದು ಎರಡನೇ ಬಲಿಯಾಗಿದೆ, ಜುಲೈ 7ರಂದು ಕಳಸದಲ್ಲಿ 52 ವರ್ಷದ ರೈತ ಮಹಿಳೆ ಶೀಲಾ ಕಾಡುಕೋಣ ದಾಳಿಗೆ ಬಲಿ ಆಗಿದ್ದರು. ಅದಾಗಿ ತಿಂಗಳು ತುಂಬುವುದರೊಳಗೆ ಮತ್ತೊಂದು ಜೀವ ಕಾಡುಕೋಣ ದಾಳಿಗೆ ಬಲಿಯಾಗಿದೆ.
ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದ ರೈತ ಮಂಜುನಾಥ್ ಎಂಬುವವರು ಮನೆಯಿಂದ ತೋಟಕ್ಕೆ ಹೋಗುತ್ತಿದ್ದಾಗ, ರಸ್ತೆಯಲ್ಲೇ ಕಾಡುಕೋಣ ದಾಳಿ ಮಾಡಿ ತಿವಿದು ಸಾಯಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಪ್ಪಿದ್ದಾರೆ
ಈ ಭಾಗದಲ್ಲಿ ನಿರಂತರ ಕಾಡುಕೋಣ ದಾಳಿಯಿಂದ ಜನ ಹೈರಾಣಾಗಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಿಂದ ಈ ಭಾಗದ ರೈತರು ಆಕ್ರೋಶದ ಕಟ್ಟೆಯೊಡೆದಿದೆ. ಆಸ್ಪತ್ರೆಯ ಎದುರು ಜಮಾಯಿಸಿ ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.


