ಕಾಫಿ ಎಸ್ಟೇಟ್ ನಲ್ಲಿ ಮರಗಸಿ ಮಾಡುವಾಗ ಆಯಾತಪ್ಪಿ ಬಿದ್ದ ಪರಿಣಾಮ ಕಾರ್ಮಿಕರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಈ ಅವಘಡ ಸಂಭವಿಸಿದೆ. ಕಳಸ ಸಮೀಪದ ಮಾವಿನಕೆರೆ ಎಸ್ಟೇಟಿನಲ್ಲಿ ಮರಗಸಿ ಮಾಡುವಾಗ ಮರದಿಂದ ಬಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ತರೀಕೆರೆ ಮೂಲದ ಮಂಜ(53) ಎಂಬುವರು ಎತ್ತರದ ಮರವನ್ನು ಏರಿ ಮರಕಸಿ ಮಾಡುತ್ತಿದ್ದಾಗ ಆಯ ತಪ್ಪಿಬಿದ್ದಿದ್ದಾರೆ. 50 ಅಡಿ ಎತ್ತರದಿಂದ ಬಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಕಳಸ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


