ಅರ್ಧ ಮಳೆಗಾಲವೇ ಮುಗಿದು ಹೋಗಿದ್ದ ಸಂದರ್ಭದಲ್ಲಿ ಇದೀಗ ತಾಲೂಕಿನಲ್ಲಿ ಹಾಳಾಗಿರುವ ಮಳೆ ಮಾಪನ ಕೇಂದ್ರಗಳನ್ನು ಅಧಿಕಾರಿಗಳು ದುರಸ್ತಿಪಡಿಸಲು ಮುಂದಾಗಿದ್ದಾರೆ. ಇದರಿಂದ ಈ ಬಾರಿ ಬೆಳೆ ವಿಮೆ ಯೋಜನೆ ರೈತರಿಗೆ ಸಮರ್ಪಕವಾಗಿ ಸಿಗಲು ಸಾಧ್ಯವಿಲ್ಲ ಎಂದು ರೈತ ಮುಖಂಡ ಪಟ್ಟದೂರು ಪಿ.ಕೆ.ನಾಗೇಶ್ ದೂರಿದ್ದಾರೆ.

ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ತಾಲೂಕಿನಲ್ಲಿ 27 ಕಡೆ ಮಳೆ ಮಾಪನ ಕೇಂದ್ರವಿದ್ದು, ಕಳೆದ ವರ್ಷ ಡಾಟಾ ಸಿಗದ ಹಾಗೂ ದುರಸ್ತಿಯಾಗಬೇಕಿದ್ದ 16 ಮಳೆ ಮಾಪನ ಕೇಂದ್ರದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿತ್ತು. ಇದೀಗ 16 ಮಳೆ ಮಾಪನ ಕೇಂದ್ರದ ಪೈಕಿ 8 ಕೇಂದ್ರ ಸ್ಥಳಾಂತರಿಸಲು ಹಾಗೂ 8 ಕಡೆ ಹಾಳಾಗಿದ್ದ ಮಳೆಮಾಪನವನ್ನು ಹೊಸದಾಗಿ ಅಳವಡಿಸಲು ಮುಂದಾಗಿದ್ದಾರೆ. ಇದರಿಂದ ಇಲ್ಲಿಯವರೆಗೆ ಸುರಿದ ಮಳೆ ಬಗ್ಗೆ ಯಾವುದೇ ಡಾಟಾ ಸಿಗದ ಕಾರಣ ಈ ಬಾರಿಯೂ ರೈತರು ಬೆಳೆವಿಮೆ ಯೋಜನೆಯಲ್ಲಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ಹೇಳಿದ್ದಾರೆ.
ಕಳೆದ ವರ್ಷ ಊರುಬಗೆ ಗ್ರಾಮದಲ್ಲಿರುವ ಮಳೆಮಾಪನ ಕೇಂದ್ರದಲ್ಲಿ ಡಾಟಾ ಸಿಗದೇ ದಾರದಹಳ್ಳಿಯಲ್ಲಿರುವ ಮಳೆ ಮಾಪನ ಕೇಂದ್ರದ ಆಧಾರದ ಮೇಲೆ ಪರಿಹಾರ ನೀಡಲು ಮುಂದಾಗಿದ್ದರು. ಊರುಬಗೆ ಗ್ರಾಮದಲ್ಲಿ ಬರುವ ಮಳೆ, ದಾರದಹಳ್ಳಿಯಲ್ಲಿ ಅರ್ಧದಷ್ಟು ಕೂಡ ಮಳೆಯಾಗುವುದಿಲ್ಲ. ಈಗಾಗಲೇ ಅರ್ಧ ಮಳೆ ಕಳೆದಿದ್ದು, ಮಳೆ ಮಾಪನ ಹಾಳಾಗಿದ್ದ ಪ್ರದೇಶದಲ್ಲಿ ರೈತರಿಗೆ ಯಾವ ರೀತಿ ಬೆಳೆ ವಿಮೆ ಕೊಡುತ್ತಾರೆಂಬ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಕಳೆದ ಸಾಲಿನಲ್ಲಾದ ಯಡವಟ್ಟು ಮತ್ತೆ ಮಾಡಬಾರದು. ರ್ಯತರಿಗೆ ವೈಜ್ಞಾನಿಕವಾಗಿ ಬೆಳೆ ವಿಮೆ ಸಿಗುವಂತೆ ತಾಲೂಕು ಆಡಳಿತ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.


