October 31, 2026
;
suddi-7 (2)

 

 

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಕೋಟಾದಡಿಯಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಸದಸ್ಯೆ ಕುಸುಮಾ ಭರತ್ ಒತ್ತಾಯಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಐದು ಶಾಸಕರನ್ನು ಗೆಲ್ಲಿಸುವಲ್ಲಿ ಗಾಯತ್ರಿ ಶಾಂತೇಗೌಡ ಶ್ರಮ ಬಹಳಷ್ಟಿದೆ. ಅಲ್ಲದೆ, ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಸಾಮಾಥ್ರ್ಯವನ್ನು ಹೊಂದಿರುವವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಇಂದಿನ ಕಾಲಘಟ್ಟದಲ್ಲಿಯೂ ಕೂಡ ಎಲ್ಲಾ ರಂಗದಲ್ಲೂ ಮಹಿಳೆಯರು ಗಂಡಸರ ಸರಿಸಮನಾಗಿ ಮುನ್ನುಗ್ಗುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಲಾಗುತ್ತಿದೆ. ಮಹಿಳಾ ಪ್ರಧಾನ, ಮಹಿಳಾ ಸಬಲೀಕರಣ, ಮಹಿಳೆಯರಿಗೂ ಸಮಾನತೆ ಇವೆಲ್ಲವೂ ವೇದಿಕೆಗಳಲ್ಲಿ ಭಾಷಣಕ್ಕೆ ಹಾಗೂ ಹೇಳಿಕೆಗಳಿಗೆ ಸೀಮಿತಗೊಳಿಸಲಾಗುತ್ತಿದೆ ಎಂದರು.

ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದಲ್ಲಿ ಉಕ್ಕಿನ ಮಹಿಳೆಯೆಂದೆ ಜಗತ್ತಿನೆಲ್ಲೆಡೆ ಗುರುತಿಸಲ್ಪಟ್ಟ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ನಡೆಸಿದಂತಹ ಕಾಂಗ್ರೆಸ್ ಪಕ್ಷದಲ್ಲಿ ಈಗ ಮಹಿಳೆಯರಿಗೆ ಬಹುತೇಕ ಕ್ಷೇತ್ರದಲ್ಲಿ ಹಿನ್ನೆಡೆಯಾಗುತ್ತಿದೆ. ಪುರುಷ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಮಹಿಳೆಯರನ್ನು ಸರಿಸಮನಾಗಿ ಕಾಣಬೇಕೆಂದು ಹೇಳಿದರು.

ಇಂದಿರಾಗಾಂಧಿಯವರು 1977 ರಲ್ಲಿ ಅವರ ಸ್ವಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ನಂತರ ಚಿಕ್ಕಮಗಳೂರು ಜಿಲ್ಲೆ 1978 ರಲ್ಲಿ ಅವರಿಗೆ ರಾಜಕೀಯ ಮರು ಜನ್ಮವನ್ನು ನೀಡಿದ ಜಿಲ್ಲೆಯಾಗಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ವಿಜಯ ಪಾತಾಕೆಯನ್ನಾರಿಸಿ, ಜಗತ್ತೆ ತಿರುಗಿ ನೋಡುವಂತೆ ಮಾಡಿದ ಚಿಕ್ಕಮಗಳೂರು ಜಿಲ್ಲೆಯನ್ನು ಈಗ ನಿರ್ಲಕ್ಷಿಸುವಂತಾಗಿದೆ ಎಂದರು.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಮಹಿಳೆಯರಿಗೆ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಹೆಸರು ಮಾಧ್ಯಮಗಳಲ್ಲಿ ಹಾಗೂ ಕಾರ್ಯಕರ್ತರ ಬಗ್ಗೆ ಚಲಾವಣೆಯಲ್ಲಿತ್ತು. ನಂತರ ವಿಧಾನ ಪರಿಷತ್ ಸದಸ್ಯತ್ವದ ಕುರಿತು ನ್ಯಾಯಾಲಯದಲ್ಲಿ ಗಾಯತ್ರಿ ಶಾಂತೇಗೌಡರ ಪರವಾಗಿ ಘೋಷಣೆಯಾಗುತ್ತಿದ್ದಂತೆ ಪ್ರಮಾಣಪತ್ರ ಸ್ವೀಕರಿಸಲು ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಆ.3 ರಂದು ಆಶ್ಚರ್ಯಕರವಾದ ರೀತಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಮುಂಚೂಣಿಗೆ ಬಂದಿದ್ದು, ನಂತರ ನಡೆದ ಪ್ರಕ್ರಿಯೆಗಳು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹಾಗೂ ಮಹಿಳೆಯರಿಗೆ ಆಘಾತವನ್ನೇ ಕೊಟ್ಟಂತಾಯಿತು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವಂತದ್ದು ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಕಳೆದ 20 ವರ್ಷಗಳಿಂದ ಅಧಿಕಾರದಿಂದ ವಂಚಿತಗೊಂಡಿದ್ದ ಕ್ಷೇತ್ರವನ್ನು ಗೆದ್ದುಕೊಂಡಿದ್ದರೂ ಕೂಡಾ ಮಹಿಳೆಯರಿಗೆ ಪ್ರಾತಿನಿದ್ಯ ಕೊಡುವಲ್ಲಿ ರಾಜ್ಯದ ವರಿಷ್ಠರು ನಿರ್ಲಕ್ಷ್ಯ ವಹಿಸಿದಂತಿದೆ. ಇನ್ನುಳಿದ ದಿನಗಳಿಗಾದರೂ ಪಕ್ಷ ಸಂಘಟಿಸಲು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಎಲ್ಲಾ ನಿಗಮ ಮಂಡಳಿಗಳಲ್ಲಿ ಸರಿಸಮನಾಗಿ ಅಧಿಕಾರವನ್ನು ನೀಡುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಶ್ರಯ ಸಮಿತಿ ಸದಸ್ಯೆ ಬಿ.ಯಶೋಧ, ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯೆ ಜಯಂತಿ ಬಿ.ಶಿವಾಜಿ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಹೇಮಾವತಿ, ಮಹಿಳಾ ಕಾಂಗ್ರೆಸ್ ಸದಸ್ಯೆ ಮಲ್ಲಿಕಾದೇವಿ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *