ಕ್ಯಾಮರಾ ಛಾಯಾಚಿತ್ರಕಾರನ ಮೂರನೇ ಕಣ್ಣಾಗಿದ್ದು ಕ್ಯಾಮರಾ ಮೂಲಕ ದೃಶ್ಯಗಳನ್ನು ನೋಡುವಾಗ ಹೊಸ ದೃಷ್ಠಿಕೋನ ಮೂಡುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಂ.ಎಲ್.ಸುನೀಲ್ ಹೇಳಿದರು.
ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಛಾಯಾಗ್ರಾಹಕ ಛಾಯಾಚಿತ್ರವನ್ನು ಕ್ಲಿಕಿಸಿದಾಗ ಚಲಿಸುವ ಕಾಲವೂ ಚಿತ್ರದಲ್ಲಿ ಸೆರೆಯಾಗುತ್ತದೆ. ಕಾಲ ನಂತರದಲ್ಲಿ ಆ ಚಿತ್ರವನ್ನು ನೋಡಿದಾಗ ಗತಿಸಿ ಹೋದ ಕಾಲದ ಕುರುಹಾಗಿ ಆ ಚಿತ್ರವೂ ಎಲ್ಲವನ್ನೂ ನೆನಪಿಸುತ್ತದೆ ಎಂದರು.
ಸಂಘದ ಸ್ಥಾಪಕ ಕಾರ್ಯದರ್ಶಿ ಪರಮೇಶ್ ಗೋಣಿಬೀಡು ಮಾತನಾಡಿ, ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘವೂ 2010ರಲ್ಲಿ ಪ್ರಾರಂಭವಾಗಿದ್ದು ಹಲವು ಕಾರ್ಯ ಚಟುವಟಿಕೆಗಳ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ ಎಂದರು.
ಹಿರಿಯ ಛಾಯಾಗ್ರಾಹಕ ವಸಂತ್ ಪೈ ಮಾತನಾಡಿ, ಛಾಯಾಗ್ರಹಣ ಕ್ಷೇತ್ರದಲ್ಲಿ ಕೆಲದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಾಂತ್ರಿಕ ಆವಿಷ್ಕಾರಗಳಿಂದಾಗಿ ಛಾಯಾಗ್ರಾಹಣ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಸಾಧ್ಯತೆಗಳನ್ನು ಕಾಣಬಹುದಾಗಿದೆ ಎಂದರು.
ಸಂಘದ ಜಿಲ್ಲಾ ಖಜಾಂಚಿ ಸತ್ಯನಾರಾಯಣ, ತಾಲ್ಲೂಕು ಕಾರ್ಯದರ್ಶಿ ದಿಲೀಪ್, ಖಜಾಂಚಿ ಸಮೃದ್ದ್ ಬಣಕಲ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ ಮಾತನಾಡಿದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಮತ್ತು ಮೂಡಿಗೆರೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಗೋಪಿನಾಥ್, ಲೋಹಿತ್, ವಿಜಯ್, ನಂದಾದೀಪ್, ಮಂಜುನಾಥ್, ದೀಪನ್ ಹಾಗೂ ಎಲ್ಲಾ ಪದಾಧಿಕಾರಿಗಳು ಇದ್ದರು.


