ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆ ಆಲ್ದೂರು ಮಂಡಲ ಬಿಜೆಪಿ ಘಟಕದ ವತಿಯಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಶನಿವಾರ ಆಯೋಜಿಸಲಾಗಿತ್ತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ಮಾತನಾಡಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ರಸ್ತೆಗಳಿಗಿಂತ ಗುಂಡಿಗಳೇ ಹೆಚ್ಚಾಗಿದ್ದು ರಸ್ತೆಗಳು ಕಾಣದಂತಾಗಿದೆ ಇದರಿಂದ ಸವಾರರು ಪರದಾಡುವುದಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಆಲ್ದೂರು ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಿಂಧು ಕುಮಾರ್ ಐದಳ್ಳಿ ನೇತೃತ್ವದಲ್ಲಿ ಆಲ್ದೂರಿನಿಂದ ಚಿಕ್ಕಮಗಳೂರಿನವರೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಒತ್ತು ನೀಡದೆ ಬಣ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದೆ ಈ ಬಾರಿ ಮಳೆ ಇಲ್ಲ, ಮಳೆ ನಿರಂತರವಾಗಿ ಸುರಿದಿದ್ದರೆ ರಸ್ತೆಗಳಲ್ಲಿ ಕಾಣಿಸುತ್ತಿರುವ ಅಲ್ಪ ಸ್ವಲ್ಪ ಡಾಂಬರುಗಳು ಉಳಿಯುತ್ತಿರಲಿಲ್ಲ ರಸ್ತೆಗಳು ಕೆರೆಕಟ್ಟೆಗಳಾಗಿ ಪರಿವರ್ತನೆಯಾಗುತ್ತಿತ್ತು ರಸ್ತೆ ದುರಸ್ತಿಗೆ ಇಂತಿಷ್ಟು ದಿನಗಳ ಗಡುವನ್ನು ನೀಡುತ್ತಿದ್ದು ಕ್ಷೇತ್ರದ ಶಾಸಕಿ ನಯನ ಮೋಟಮ್ಮ ರಸ್ತೆ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ತಂದು ದುರಸ್ತಿಗೊಳಿಸದಿದ್ದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಲ್ನಡಿಗೆ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಿಂಧು ಕುಮಾರ್ ಐದಳ್ಳಿ, ಮಂಡಲದ ವ್ಯಾಪ್ತಿಯ ರಸ್ತೆಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡುವಂತಿದಿದ್ದರೆ, ಸಂಪೂರ್ಣವಾಗಿ ಯಾವುದಕ್ಕೂ ದೊರೆಯುತ್ತಿರಲಿಲ್ಲ, ಶಾಲಾ ಕಾಲೇಜುಗಳು, ಆಸ್ಪತ್ರೆ ಗಳ ಮುಂಭಾಗದಲ್ಲಂತೂ ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿ ದುಸ್ತರವಾಗಿದ್ದು, ಜನರು ಹೈರಾಣಾಗಿದ್ದಾರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ರಸ್ತೆಗಳ ದುಸ್ಥಿತಿಯನ್ನು ವಿವರಿಸುವುದಕ್ಕಿಂತಲೂ ಇದೇ ಮಾರ್ಗದಲ್ಲಿ ಸಂಚರಿಸುವ ಕಾಂಗ್ರೆಸ್ ಮುಖಂಡರಿಗೆ ತಿಳಿದಿಲ್ಲವೇ, ಜನರಿಗಾಗಿ ಬಿಜೆಪಿ ಮಂಡಲ ಯುವ ಮೋರ್ಚ ವತಿಯಿಂದ ಕಾಲ್ನಡಿಗೆ ಪಾದಯಾತ್ರೆಯನ್ನು ಆಯೋಜಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಶೃಂಗೇರಿ ಇನ್ನಿತರ ಕಡೆಗಳಲ್ಲಿ ರಸ್ತೆಗಳ ಕಾಮಗಾರಿಗಳು ನಡೆದಿದೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ ಜನರ ಸಮಸ್ಯೆ ಗಾಗಿ ಪಾದಯಾತ್ರೆಯನ್ನು ಆಯೋಜಿಸಿದ ಕೂಡಲೇ ಕ್ಷೇತ್ರದಲ್ಲಿ ಮಾಡಿರುವ ಕಾಮಗಾರಿಗಳ ಪಟ್ಟಿಯನ್ನು ನಮ್ಮ ಬ್ಯಾನರ್ಗಳ ಪಕ್ಕದಲ್ಲಿ ಹಾಕಿಸಿದ್ದಾರೆ, ಬಳಿಕ ಜೆಸಿಬಿ ಇನ್ನಿತರ ರಸ್ತೆ ಯಂತ್ರಗಳನ್ನು ಹರಿಸಿ ಈಗ ಕೆಲಸ ಆರಂಭಿಸುತ್ತಿದ್ದಾರೆ, ಈ ರೀತಿ ಕಣ್ಣೊರೆಸುವ ತಂತ್ರಗಳನ್ನು ಮಾಡಿ ಜನರನ್ನು ಯಾಮಾರಿಸುವ ಯತ್ನಕ್ಕೆ ಕ್ಷೇತ್ರದ ಶಾಸಕರು ಮುಖಂಡರು ಮುಂದಾಗಿದ್ದಾರೆ ಈ ರಸ್ತೆಯ ಮೂಲಕವೇ ಶೃಂಗೇರಿ ಜಯಪುರ ಕೊಪ್ಪ ಹೊರನಾಡು ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿ ತಾಣಗಳಿಗೆ ಹೊರದೇಶ ಹೊರ ಜಿಲ್ಲೆಗಳಿಂದ ಸಾರ್ವಜನಿಕರು ಪ್ರವಾಸಿಗರು ಪ್ರಯಾಣಿಕರು ಸಂಚರಿಸುತ್ತಾ
ಇರುತ್ತಾರೆ ಮುಖ್ಯ ರಸ್ತೆಗಳ ಪರಿಸ್ಥಿತಿ ಈ ರೀತಿ ಇದ್ದರೆ ಇನ್ನು ಗ್ರಾಮೀಣ ಪ್ರದೇಶಗಳ ಹಳ್ಳಿಗಳ ದುಸ್ಥಿತಿಯನ್ನು ಊಹಿಸಲು ಸಾಧ್ಯವೇ ಎಂದು ಟೀಕಿಸಿದರು.
ಮುಖಂಡ ದೀಪಕ್ ದೊಡ್ಡಯ್ಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿಗಳಲ್ಲಿ ರಸ್ತೆಯನ್ನು ಹುಡುಕುವ ದುಸ್ಥಿತಿ ಎದುರಾಗಿದೆ ಎಂದರು.
ಯುವ ಮುಖಂಡ ಶಶಿ ಹಂಗರವಳ್ಳಿ, ಜನರಿಗೆ ಶಕ್ತಿ ಯೋಜನೆ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರ ಗುಂಡಿ ಭಾಗ್ಯ ಯೋಜನೆ ಮೂಲಕ ಪಯಣಿಸಿ ಆಸ್ಪತ್ರೆ ಸೇರುವ ಅತ್ಯುತ್ತಮ ಭಾಗ್ಯವನ್ನು ಒದಗಿಸಿದ್ದಾರೆ ಜನರ ಭವಣೆ ಸಂಕಷ್ಟಕ್ಕಾಗಿ ಯುವ ಮೋರ್ಚಾ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದರು.
ಅಂಬೇಡ್ಕರ್ ಪುತ್ಥಳಿ ಮತ್ತು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಹೋಗುತ್ತಾ ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸುತ್ತಾ ಚಿಕ್ಕಮಗಳೂರಿನ ಕಡೆಗೆ ಪಾದಯಾತ್ರೆ ಮುಂದುವರಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹೆಡದಾಳು ಸಂಪತ್, ಜಿಲ್ಲಾ ಉಪಾಧ್ಯಕ್ಷ ರುಗಳಾದ ಕವೀಶ್ ಎಚ್‍ಎಸ್ ,ವೀಣಾ ಶೆಟ್ಟಿ, ದಿನೇಶ್ ಮುಗುಳುವಳ್ಳಿ, ಕಾರ್ಯದರ್ಶಿ ಚಂಪಾ ಜಗದೀಶ್,ಕುರುವಂಗಿ ವೆಂಕಟೇಶ್, ಕೃಷ್ಣಮೂರ್ತಿ, ಚಮೀನ, ,ವಿನೋದ್ ಬೊಗಸೆ, ಪುಣ್ಯಪಾಲ್,ಸಂತೋಷ್ ಕೋಟ್ಯಾನ್, ಮುಖಂಡರುಗಳಾದ ಮನು ರಾಮ್,ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್ ಕೂದುವಳ್ಳಿ, ರವೀಂದ್ರ ಆನಿಗನಹಳ್ಳಿ,ಸುದರ್ಶನ್ ಬನ್ನೂರು,ನಾಗೇಶ್ ಡಿಜೆ, ಸ್ವರೂಪ್, ಸಂದೀಪ್ ಹರಿವಿನ ಗಂಡಿ,ಕೆರೆಮಕ್ಕಿ ಮಹೇಶ್, ಬೈಗೂರು ನಾಗೇಶ್, ಹೋಬಳಿ ಅಧ್ಯಕ್ಷ ನಾಗೇಶ್ ಭೂತನಕಾಡು, ಮಹಿಳಾ ಮೋರ್ಚಾದ ಮುಖಂಡರುಗಳಾದ ಪ್ರತಿಭಾ ನವೀನ್, ಪುಷ್ಪಾರಾಜು, ಹೋಬಳಿಗಳಿಂದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.



