ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಪ್ರಜಾಪ್ರಭುತ್ವದ ಹಕ್ಕು. ಹಾಗಾಗಿ ಎಲ್ಲಾ ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ವಿವರಗಳನ್ನು ಪರಿಶೀಲಿಸಿಕೊಳ್ಳಬೇಕೆಂದು ಉಪ ವಿಭಾಗಾಧಿಕಾರಿ ಎಸ್.ರವಿ ಹೇಳಿದರು.
ಅವರು ಸೋಮವಾರ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆಯ ಕರಡು ಪಟ್ಟಿ ಬಿಡುಗಡೆಗೊಳಿಸಿದ್ದು, ಹೆಸರು ಬಿಟ್ಟಿದ್ದರೆ ಪುನಃ ಸೇರ್ಪಡೆಗೊಳಿಸಲು ಹಾಗೂ 18 ವರ್ಷ ತುಂಬಿದವರು ಕೂಡ ಫಾರಂ 6ರ ಮೂಲಕ ಅರ್ಜಿ ಸಲ್ಲಿಸಲು ಅ.23ರವರೆಗೆ ಅವಕಾಶವಿದೆ. ಅಲ್ಲದೇ ಮುಂದೆಯೂ ಕೂಡ ಕರಡು ಪಟ್ಟಿಯ ವಿರುದ್ಧ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 231 ಮತಗಟ್ಟಯಿತ್ತು. ಮತಗಟ್ಟೆಯಲ್ಲಿ 1200ಕ್ಕೂ ಅಧಿಕ ಮತದಾರರು ಇರುವ ಕಾರಣದಿಂದ 2 ಮತಗಟ್ಟೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದೆ. ಕಳೆದ ಸಾಲಿನಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ 167299 ಮತದಾರರಿದ್ದರು. ಇದೀಗ 153427 ಮತದಾರರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 3985 ಮಂದಿ ಮೃತಪಟ್ಟಿದ್ದು, 666 ಮಂದಿ ಮಾಹಿತಿಗೆ ಸಿಕ್ಕಿಲ್ಲ. ಇದರಲ್ಲಿ ಶಾಶ್ಚತವಾಗಿ ಹೊರ ಹೋದವರು 8043 ಮಂದಿ, ನಕಲಿ 1134, ಇತರೇ 44 ಸೇರಿದಂತೆ ಒಟ್ಟು 13872 ಮತಗಳು ತೆಗೆದುಹಾಕಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಎಸ್.ಅಶ್ವಿನಿ, ತಾ.ಪಂ. ಇಒ ದಯಾವತಿ, ವಿವಿಧ ಪಕ್ಷಗಳ ಏಜೆಂಟರು ಹಾಗೂ ಬಿಎಲ್‍ಒ ಗಳು ಉಪಸ್ಥಿತರಿದ್ದರು.


