ಪಶ್ಚಿಮಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂಬ ಹೆಸರಿನಲ್ಲಿ ಡಾ. ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಜಾರಿ ಮಾಡಲು ಹೊಂದಿರುವ ಕ್ರಮಗಳ ಬಗ್ಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಈ ಹಿಂದಿನಿಂದಲೂ ಆಕ್ಷೇಪಣೆ ಸಲ್ಲಿಸುತ್ತಲೇ ಬಂದಿದೆ. ಈಗ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ. ಶಿವಕುಮಾರ್‍ರವರು ಸೆಪ್ಟೆಂಬರ್ 21,22 ಮತ್ತು 23 ರಂದು ವಿಶೇಷ ಅಧಿವೇಶನವನ್ನು ಕಸ್ತೂರಿರಂಗನ್ ವಿಚಾರವಾಗಿಯೇ ಕರೆದಿರುವುದು ಸ್ವಾಗತಾರ್ಹ.
ಇದಕ್ಕೆ ಪೂರ್ವಬಾವಿಯಾಗಿ 2026 ನೇ ಸೆಪ್ಟೆಂಬರ್ 19ರಂದು ಶನಿವಾರ ಬಾಳೆಹೊನ್ನೂರಿಗೆ ಮಾನ್ಯ ಮುಖ್ಯಮಂತ್ರಿಗಳು ಜನರ ಜೊತೆ ಸಂವಾದಕ್ಕೆ ಆಗಮಿಸುತ್ತಿರುವುದು ಸಮಾಧಾನಕರ ವಿಚಾರ.
ಪಶ್ಚಿಮಘಟ್ಟಗಳ ಮೂಲ ನಿವಾಸಿಗಳ ರೈತಬೆಳೆಗಾರರ ಮನವಿಗೆ ಸ್ಪಂದಿಸಿ ಜನಸಾಮಾನ್ಯರ ಬದುಕಿಗೆ ಮಾರಕವಾಗಬಹುದಾದ ಯಾವುದೇ ಅಂಶಗಳನ್ನು ರಾಜ್ಯ ಸರ್ಕಾರ ಸಾರಾಸಗಟ್ಟಾಗಿ ತಿರಸ್ಕರಿಸಿರುವುದು ಎಂಬ ಮಾನ್ಯ ಮುಖ್ಯಮಂತ್ರಿಗಳ ನಿಲುವಿಗೆ ನಾವು ಗೌರವ ಪೂರ್ವಕವಾಗಿ ಅಭಿನಂದನೆ ತಿಳಿಸುತ್ತೇವೆ.
ಹಾಗೆಯೇ ಸೆಪ್ಟೆಂಬರ್ 19ರ ಶನಿವಾರ ಮದ್ಯಾಹ್ನ 3.00 ಗಂಟೆಗೆ ಬಾಳೆಹೊನ್ನೂರಿನ ಕಲಾಭವನ, ಗಣಪತಿ ಪೆಂಡಾಲ್‍ನಲ್ಲಿ ನಡೆಯುವ ಮಾನ್ಯ ಮುಖ್ಯಮಂತ್ರಿ ಅವರ ಸಂವಾದ ಕಾರ್ಯಕ್ರಮಕ್ಕೆ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿತವಾಗಿರುವ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯ ಎಲ್ಲಾ ರೈತ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಂದ್ರ ಟಿ.ಪಿ.ಸುರೇಂದ್ರ ಮನವಿ ಮಾಡಿದ್ದಾರೆ.


