ಸರ್ವರ್ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್‍ಗೆ ಇ ಕೆವೈಸಿ ಮಾಡಿಸಲು ಪಡಿತರದಾರರು ತೊಂದರೆ ಅನುಭವಿಸುವಂತಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಕೆಲದಿನಗಳಿಂದ ಪಡಿತರದಾರರು ಇ ಕೆವೈಸಿ ಮಾಡಿಸಲು ಸಾಲುಗಟ್ಟಿ ನಿಂತಿದ್ದು ಸರ್ವರ್ ಸಮಸ್ಯೆಯಿಂದಾಗಿ ಹೈರಾಣಾಗಿದ್ದಾರೆ. ದಿನವೊಂದಕ್ಕೆ ಹತ್ತರಿಂದ ಹದಿನೈದು ಇಕೆವೈಸಿ ಮಾತ್ರವಾಗುತ್ತಿದ್ದು ನೂರಾರು ಜನ ಇ ಕೆವೈಸಿ ಮಾಡಲಾಗದೇ ಕೆಲ ದಿನಗಳಿಂದ ನ್ಯಾಯಬೆಲೆ ಅಂಗಡಿಯ ಬಾಗಿಲು ಕಾಯುವಂತಾಗಿದೆ.
ರೇಷನ್ ಕಾರ್ಡ್‍ನಲ್ಲಿ ಹೆಸರಿರುವ ಕುಟುಂಬದ ಎಲ್ಲಾ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಆಗಮಿಸಿ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಶಾಲಾ ವಿದ್ಯಾರ್ಥಿಗಳು, ಬೇರೆ ಬೇರೆ ಊರುಗಳಲ್ಲಿ ಉದ್ಯೋಗ ಮಾಡುತ್ತಿರುವವರು ಇಕೆವೈಸಿ ಮಾಡಿಸಲು ಎರಡು ಮೂರು ದಿನ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೆ ಅಲೆಯುವಂತಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಬಿರುಬಿಸಿಲಿನಲ್ಲಿ ಪಡಿತರದಾರರು ಕಾದು ನಿಲ್ಲುವಂತಾಗಿದೆ.
ಈ ಬಗ್ಗೆ ಮಾತನಾಡಿದ ಬಣಕಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಸರ್ಕಾರಿ ವ್ಯವಸ್ಥೆಯಲ್ಲಿ ಆಹಾರ ಇಲಾಖೆಯೂ ಸೇರಿದಂತೇ ಹಲವು ಇಲಾಖೆಗಳ ಸಾಪ್ಟ್‍ವೇರ್‍ಗಳಲ್ಲಿ ಆಗಾಗ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಇಂತಹ ಸಾಪ್ಟವೇರ್‍ಗಳನ್ನು ಯಾವ ಸಂಸ್ಥೆಗಳು ರೂಪಿಸುತ್ತವೆ. ದೋಷಪೂರಿತವಾದ ಇಂತಹ ಸಾಪ್ಟ್‍ವೇರ್‍ಗಳನ್ನು ಸರಿಪಡಿಸಲು ಸರ್ಕಾರ ಯಾಕೆ ಪ್ರಯತ್ನಿಸುತ್ತಿಲ್ಲ. ಇದರಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಜನರ ಸಮಯ ವ್ಯರ್ಥವಾಗುತ್ತಿದೆ. ಸರ್ಕಾರ ಕೂಡಲೇ ಸರ್ವರ್ ಸಮಸ್ಯೆಯನ್ನು ಸರಿಪಡಿಸಬೇಕು ಮತ್ತು ಇಂತಹ ಸಾಪ್ಟ್‍ವೇರ್‍ಗಳನ್ನು ರೂಪಿಸಿದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


