ರಾಜ್ಯ ಮಟ್ಟದ ಕಾಫಿ ಬೆಳೆಗಾರರ ತಾಂತ್ರಿಕ ಸಮಾವೇಶ ಮತ್ತು ವಿಚಾರ ಸಂಕೀರ್ಣ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಪ್ರದರ್ಶನ ಸೆಪ್ಟಂಬರ್ 18 ಮತ್ತು 19 ರಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು.ರತೀಶಕುಮಾರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10-30ಕ್ಕೆ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ ಹಾಗೂ ಟೆಂಡರ್ ಟುಡೇ ಗ್ರೂಪ್ಸ್ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮವನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು.ರತೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಲೋಗೊವನ್ನು ಶಾಸಕ ಹೆಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ವುಮೆನ್ಸ್ ಕಾಫಿ ಪೋರಂ ಲೋಗೊವನ್ನು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ.ಡಿ.ರಾಜೇಗೌಡ, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ. ಎಸ್.ಎಲ್.ಭೋಜೇಗೌಡ, ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮರಾವ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಆಲ್ ಇಂಡಿಯಾ ಕಾಫಿ ಕ್ಯೂರರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ.ಎನ್.ದೇವರಾಜ್, ಜಿಲ್ಲಾ ಮಹಿಳಾ ಬೆಳೆಗಾರರ ಸಂಘದ ಅಧ್ಯಕ್ಷೆ ಪವಿತ್ರಾ ರತೀಶ ಹಳೇಕೋಟೆ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 3 ಗಂಟೆಗೆ ವಿಚಾರ ಸಂಕೀರಣದಲ್ಲಿ ಭಾರತದ ಕಾಫಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಮಾಡುವ ಕುರಿತು ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಕಾಳು ಮೆಣಸು ಲಾಭದಾಯಕ ಬೆಳೆ ಹೇಗೆ ಕುರಿತು ನಿವೃತ್ತ ವಿಜ್ಞಾನಿ ಡಾ.ವೇಣುಗೋಪಾಲ್, ಕಾಫಿಯ ಬೆಲೆ ಒಂದು ಲೆಕ್ಕಾಚಾರ ಕುರಿತು ಲೆಕ್ಕ ಪರಿಣಿತ ಕೆ.ಕೆ.ವಿಶ್ವನಾಥ್ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಮಾತನಾಡಿ, ಸೆ.19 ರಂದು ಬೆಳಿಗ್ಗೆ 11 ಗಂಟೆಗೆ ಕಾಫಿ ಮಂಡಳಿ ಉಪನಿರ್ದೇಶಕ ಡಾ.ತಂಗರಾಜು ಉಪಸ್ಥಿತಿಯಲ್ಲಿ ತಮಿಳುನಾಡು ಪ್ರಗತಿಪರ ರೈತ ರೇಜೀಸ್ ಅವರು ಕಾಫಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು, ಪ್ರಗತಿಪರ ಬೆಳೆಗಾರ ಡಾ.ಧರ್ಮರಾಜ್ ಹೊಂಕರವಳ್ಳಿ ಅವರು ಕಾಫಿಯಲ್ಲಿ ಉತ್ತಮ ಬೆಳೆ ತೆಗೆಯುವುದು ಹೇಗೆ ಎಂಬ ಕುರಿತು, ಪ್ರಗತಿಪರ ಬೆಳೆಗಾರ ಕವಿತಾ ಲಿಂಗರಾಜು ಅವರು ಕಾಫಿ ಕೃಷಿಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಕಾಫಿ ಬೆಳೆಗಾರರ ತಾಂತ್ರಿಕ ಸಮಾವೇಶ ಮತ್ತು ವಿಚಾರ ಸಂಕೀರ್ಣ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾಫಿ ಬೆಳೆಗಾರರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ದಾವಣಗೆರೆ ಟೆಂಡರ್ ಟುಡೇ ಗ್ರೂಪ್ಸ್ ಮುಖಂಡ ಶ್ರೀಹರಿ ಎನ್.ಗೌರಿಪುರ, ಜಿಲ್ಲಾ ಮಹಿಳಾ ಬೆಳೆಗಾರರ ಸಂಘದ ಅಧ್ಯಕ್ಷೆ ಪವಿತ್ರಾ ರತೀಶ ಹಳೇಕೋಟೆ, ಪದ್ಮಿನಿ, ಆರತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


