September 19, 2026
;
16Mudigere1A

 

 

ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಹುದ್ದೆ, ಸಾಧಕರನ್ನು  ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಖ್ಯಾತ ಹಾಸ್ಯ ಕಲಾವಿದೆ ಸುಧಾ ಬರಗೂರ್ ಹೇಳಿದರು.

ಅವರು ಬುಧವಾರ ಪಟ್ಟಣದ ರೈತ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರ ಕೈಯಲ್ಲಿ ಬೆತ್ತವಿದ್ದ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಕಲಿಕೆ ವಾತಾವರಣ ಉತ್ತಮವಾಗಿತ್ತು. ಇದೀಗ ಮಕ್ಕಳಿಗೆ ಶಿಕ್ಷಕರು ದೈಹಿಕ ಶಿಕ್ಷೆ ನೀಡಬಾರದೆಂಬ ಕಾನೂನು ಜಾರಿಯಲ್ಲಿದ್ದು, ಶಿಕ್ಷಕರು ಹಲವು ರೀತಿಯ ಭಯ ಹಾಗೂ ಒತ್ತಡದ ನಡುವೆಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಅಲ್ಲದೇ ಚುನಾವಣೆ ಸಂದರ್ಭ, ಎಸ್‍ಐಆರ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಹೆಚ್ಚುವರಿ ಕೆಲಸಗಳಿಂದ ಶಿಕ್ಷಕರನ್ನು ಸರಕಾರ ಮುಕ್ತಗೊಳಿಸಿ, ಮಕ್ಕಳಿಗೆ ಪಾಠ ಕಲಿಸುವ ಹಾಗೂ ಅವರ ಭವಿಷ್ಯ ರೂಪಿಸುವ ಕಾರ್ಯಕ್ಕೆ ಅವಕಾಶ ನೀಡಬೇಕು. ಆಗ ಮಾತ್ರ ಶಿಕ್ಷಕರು ಭಾರತದ ಭವಿಷ್ಯ ನಿರ್ಮಾಣದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

 

ಪ್ರತಿ ಹಳ್ಳಿಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವಿಶೇಷವಾಗಿ ಇಂಗ್ಲಿಷ್ ಮಾತನಾಡುವ ಕೌಶಲ್ಯ, ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ದೊಡ್ಡ ಕನಸು ಕಾಣುವ ಮನೋಭಾವ ಬೆಳೆಸಬೇಕು. ಸನ್ಮಾನಕ್ಕೆ ಯಾರೂ ಆಸೆ ಪಡಬಾರದು. ಬದಲಾಗಿ ಮಕ್ಕಳ ಮನಸ್ಸಲ್ಲಿ ಉತ್ತಮ ಸ್ಥಾನ ಪಡೆದರೆ ಅದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ. ಶಿಕ್ಷಕರು ಇಂದೇ ಆದರ್ಶ ಶಿಕ್ಷಕರಾಗುವ ಸಂಕಲ್ಪ ಮಾಡಬೇಕು. ತಮ್ಮ ಶಾಲೆಯಲ್ಲಿ ಪಾಠ ಕಲಿಯುವ ಮಕ್ಕಳು ಮುಂದೊಂದು ದಿನ ಉನ್ನತ ಹುದ್ದೆಯನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳು ಅಲಂಕರಿಸಬೇಕೆಂಬ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಬೇಕು. ನಿವೃತ್ತಿ ಎಂಬುದು ಸರಕಾರಿ ಸೇವೆಗೆ ಮಾತ್ರ ಅನ್ವಯಿಸುತ್ತದೆಯೆ ಹೊರತು,  ಶಿಕ್ಷಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲವೆಂದು ಹೇಳಿದರು.

ಇದಕ್ಕೂ ಮುನ್ನ ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿ ಸಾಮಾನ್ಯವಾದುದಲ್ಲ. ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರು ಶಿಲ್ಪಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿವೆ. ಆದರೆ ಇಂಗ್ಲಿಷ್ ವ್ಯಾಮೋಹದಿಂದ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಷಾದನೀಯ. ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಪೆÇೀಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಮೊಬೈಲ್ ಬಳಕೆಗೆ ಹಾಗೂ ಮಹಿಳೆಯರು ಧಾರಾವಾಹಿಗಳಿಗೆ ಹೆಚ್ಚು ಅವಲಂಬಿತರಾಗುತ್ತಿರುವುದು ಕುಟುಂಬ ಮತ್ತು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಮಾನಸಿಕ ದೃಢತೆ ಬೆಳೆಸಲು ಪೆÇೀಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಇಒ ಎನ್.ಎ.ಮೀನಾಕ್ಷಿ ವಹಿಸಿದ್ದರು.

ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಕೆಡಿಪಿ ಸದಸ್ಯರಾದ ಎಂ.ಎಸ್.ಅಶ್ವತ್, ರವಿ ಕುನ್ನಳ್ಳಿ, ಸುರೇಂದ್ರ ಉಗ್ಗೇಹಳ್ಳಿ, ಎಂ.ಆರ್.ಸಂಪತ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಹೇಮಂತಚಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕಿ ಲವೀನಾಸಿಲ್ವಿಯಾ ಲೋಬೋ, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಕರಿಯಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಫೈರೋಜ್ ಅಹಮ್ಮದ್, ತಾಲೂಕು ಅಧ್ಯಕ್ಷ ಎಚ್.ಎಲ್.ಸುಧಾಕರ್, ಪ್ರೌಢಶಾಲೆ ಸಹ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಶಿವರಾಮೇಗೌಡ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಮಂಜಪ್ಪ, ಉರ್ದು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಸ್ಗರ್ ಅಲಿಖಾನ್, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಮಿಮುನ್ನಿಸ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *