ವಿಶ್ವಕರ್ಮ ಜಯಂತಿ ಕೇವಲ ಪರಂಪರೆಯ ಆಚರಣೆಯಲ್ಲ. ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಮಹತ್ವವನ್ನು ಸಾರುವ ಪವಿತ್ರ ದಿನವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ವಿಶ್ವಕರ್ಮ ಆಚಾರ್ಯರು ಬ್ರಹ್ಮನ ಪುತ್ರರು ಎಂಬ ನಂಬಿಕೆಯಿದ್ದು, ಹಿಂದೂ ಪರಂಪರೆಯಲ್ಲಿ ದೇವಶಿಲ್ಪಿಯಾಗಿ ಪೂಜಿಸಲ್ಪಡುತ್ತಾರೆ. ದೇವತೆಗಳ ಶಸ್ತ್ರಾಸ್ತ್ರಗಳು, ಆಭರಣಗಳು, ದೇವಾಲಯಗಳು ಹಾಗೂ ಪ್ರಮುಖ ನಗರಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಶಿಲ್ಪ ಕೌಶಲದ ಮಹತ್ವವನ್ನು ಸ್ಮರಿಸಲಾಗುತ್ತದೆ ಎಂದರು.
ವಿಶ್ವಕರ್ಮ ಸಮಾಜದ ಪಂಚ ಕಸುಬುಗಳಾದ ಕಬ್ಬಿಣದ ಕೆಲಸ, ಮರದ ಕೆಲಸ, ಚಿನ್ನ-ಬೆಳ್ಳಿ ಕೆಲಸ, ಶಿಲ್ಪಕಲೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕೌಶಲಗಳು ಇಂದಿಗೂ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಮರ, ಬಂಡೆ ಹಾಗೂ ಲೋಹಗಳಿಗೆ ರೂಪ ನೀಡಿ ಕಲಾತ್ಮಕ ಸೃಷ್ಟಿಗಳನ್ನು ನಿರ್ಮಿಸುವ ಅಪೂರ್ವ ಕೌಶಲ ವಿಶ್ವಕರ್ಮ ಸಮುದಾಯದ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಇಂದಿನಂತೆ ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳು ಅಥವಾ ಆರ್ಕಿಟೆಕ್ಟ್‍ಗಳ ವ್ಯವಸ್ಥೆ ಇರಲಿಲ್ಲ. ಆದರೂ ಹೊಯ್ಸಳರು, ಚೋಳರು ಹಾಗೂ ಇತರ ರಾಜವಂಶಗಳ ಕಾಲದಲ್ಲಿ ನಿರ್ಮಾಣಗೊಂಡಿರುವ ಅದ್ಭುತ ದೇವಾಲಯಗಳು ವಿಶ್ವಕರ್ಮ ಶಿಲ್ಪಿಗಳ ಜ್ಞಾನ, ಕೌಶಲ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಶಿಲ್ಪಿಗಳು ಕೇವಲ ಕಲಾವಿದರಷ್ಟೇ ಅಲ್ಲದೆ ತಂತ್ರಜ್ಞಾನ, ಯಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಕಾರ್ಮಿಕ ಕೌಶಲ್ಯವನ್ನು ಸಂಯೋಜಿಸಿದ ಸೃಜನಶೀಲ ತಂತ್ರಜ್ಞರಾಗಿದ್ದರು ಎಂದರು.
ಇಂದಿನ ಇಂಜಿನಿಯರ್‍ಗಳು, ತಂತ್ರಜ್ಞರು ಹಾಗೂ ಶಿಲ್ಪಿಗಳ ಕಾರ್ಯಕ್ಷೇತ್ರಗಳಲ್ಲಿಯೂ ವಿಶ್ವಕರ್ಮ ಪರಂಪರೆಯ ಪ್ರೇರಣೆ ಕಾಣಬಹುದು. ವಿಶ್ವಕರ್ಮ ಜಯಂತಿ ಮತ್ತು ಇಂಜಿನಿಯರ್ಸ್ ಡೇಯನ್ನು ಕೆಲವೆಡೆ ಒಟ್ಟಿಗೆ ಆಚರಿಸುವ ಪರಿಪಾಠವೂ ಇದೆ ಎಂದು ಅವರು ಹೇಳಿದರು.
2015ರಲ್ಲಿ ರಾಜ್ಯ ಸರ್ಕಾರ ಸೆಪ್ಟೆಂಬರ್ 17 ರಂದು ಪ್ರತಿ ವರ್ಷ ವಿಶ್ವಕರ್ಮ ಜಯಂತಿ ಆಚರಿಸಲು ಆದೇಶ ನೀಡಿದ್ದು, ಮುಂದಿನ ಪೀಳಿಗೆಗೆ ವಿಶ್ವಕರ್ಮ ಆಚಾರ್ಯರ ಶಿಲ್ಪಕಲೆ, ಪರಂಪರೆ ಮತ್ತು ಕೊಡುಗೆಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ ಎಂದರು.
ವಿಜ್ಞಾನ ಮತ್ತು ಸಂಸ್ಕೃತಿಯನ್ನು ಸಮನ್ವಯಗೊಳಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ. ವಿಶ್ವಕರ್ಮ ಸಮಾಜದ ಪರಂಪರೆಯಿಂದ ಇಂದಿನ ಇಂಜಿನಿಯರ್‍ಗಳು ಹಾಗೂ ತಂತ್ರಜ್ಞರು ಪ್ರೇರಣೆ ಪಡೆಯಬೇಕಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ಜೀವನದ ವಿಶ್ವಕರ್ಮರಾಗಬೇಕು. ತಮ್ಮ ದುಡಿಮೆ, ಶ್ರದ್ಧೆ ಮತ್ತು ಕೌಶಲದಿಂದ ತಮ್ಮ ಬದುಕಿನ ಕಟ್ಟಡವನ್ನು ತಾವೇ ನಿರ್ಮಿಸಿಕೊಳ್ಳಬೇಕು. ವಿಶ್ವಕರ್ಮ ಆಚಾರ್ಯರ ವಿಚಾರಧಾರೆಗಳನ್ನು ಕೇವಲ ಜಯಂತಿ ದಿನಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ವಿಶ್ವಕರ್ಮ ಜಯಂತಿಯಂತಹ ಕಾರ್ಯಕ್ರಮಗಳಿಗೆ ಯುವಕರು ಹಾಗೂ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಮೂಲಕ ಅವರಿಗೆ ತಮ್ಮ ಸಮುದಾಯದ ಇತಿಹಾಸ, ಪರಂಪರೆ, ಆಚಾರ ವಿಚಾರ ಮತ್ತು ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು ಎಂದರು.
ವಿಶ್ವಕರ್ಮ ಸಮುದಾಯದ ಯುವಕರು ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಗತಿ ಸಾಧಿಸಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಬೇಲೂರು, ಹಳೇಬೀಡು, ಬೆಳವಾಡಿ ಹಾಗೂ ಅಮೃತಾಪುರದಂತಹ ಐತಿಹಾಸಿಕ ದೇವಾಲಯಗಳಲ್ಲಿನ ಅದ್ಭುತ ಶಿಲ್ಪಕಲೆ ವಿಶ್ವಕರ್ಮ ಶಿಲ್ಪಿಗಳ ಅಪೂರ್ವ ಪ್ರತಿಭೆಗೆ ಸಾಕ್ಷಿಯಾಗಿದೆ. ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯೇ ಇಂತಹ ಅದ್ಭುತ ಕಲಾಕೃತಿಗಳನ್ನು ನಿರ್ಮಿಸಿರುವುದು ನಮ್ಮ ಶಿಲ್ಪಿಗಳ ಜ್ಞಾನ ಮತ್ತು ಕೌಶಲದ ಮಹತ್ವವನ್ನು ತೋರಿಸುತ್ತದೆ ಎಂದರು.
ವಿಶ್ವಕರ್ಮ ಸಮಾಜದ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಅಮರಶಿಲ್ಪಿ ಜಕಣಾಚಾರಿ ಅವರಂತಹ ಮಹಾನ್ ಶಿಲ್ಪಿಗಳ ಕೊಡುಗೆಯನ್ನು ಸ್ಮರಿಸುವ ಮೂಲಕ ಯುವ ಜನರಲ್ಲಿ ಶಿಲ್ಪಕಲೆ ಮತ್ತು ಪರಂಪರೆಯ ಬಗ್ಗೆ ಗೌರವ ಮೂಡಿಸಬೇಕು ಎಂದು ಹೇಳಿದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಚಿಕ್ಕಮಗಳೂರು ತಾಲೂಕು ಉಪ ತಹಶೀಲ್ದಾರ್ ರಾಮ್ ರಾವ್ ದೇಸಾಯಿ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರಾಚಾರ್ಯರು, ಗೌರವಾಧ್ಯಕ್ಷ ಚೇತನ್ ಕುಮಾರ್, ಮುಖಂಡರಾದ ರತೀಶ್, ರಮೇಶ್ ಕಡಿದಾಳ್, ನಾರಾಯಣಚಾರ್ಯ ಉಪಸ್ಥಿತರಿದ್ದರು.


