September 19, 2026
;
suddi-8

 

 

ಪಾಂಡಿಚೇರಿಯಲ್ಲಿ ನಡೆಯುತ್ತಿರುವ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಕ್ರೀಡಾಪಟು ವಿದುಷಾ ಜೈನ್ ಅವರು 18ರ ವಯೋಮಾನದ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿರುವ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ವಿದುಷಾ ಜೈನ್, 18ರ ವಯೋಮಾನದವರ ವಿಭಾಗದಲ್ಲಿ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿಶೇಷವೆಂದರೆ ವಿದುಷಾ ಪ್ರಸ್ತುತ 16 ವರ್ಷ ವಯಸ್ಸಿನವರಾಗಿದ್ದು, 18ರ ವಯೋಮಾನದವರ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗಳಿಸಿರುವುದು ಅವರ ಕ್ರೀಡಾ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯ ಮೂಲಕ ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆಯುವ ನಿರೀಕ್ಷೆ ಮೂಡಿದೆ.

ಕಳಸದ ವೀಣಾ ಸತ್ಯೇಂದ್ರರವರ ಪುತ್ರಿಯಾಗಿದ್ದ ಇವರು ಕಳಸ ಜೆಇಎಂ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಪೂರ್ಣ ಪ್ರಜ್ಞಾ ಕಾಲೇಜು, ಸಂಗಮೇಶ್ವರಪೇಟೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಪ್ರತಿಭೆ ಮತ್ತು ಅರ್ಹತೆ ಇದ್ದರೂ, ಸೂಕ್ತ ಕ್ರೀಡಾ ಮೈದಾನ ಹಾಗೂ ಅಭ್ಯಾಸದ ಸೌಲಭ್ಯಗಳ ಕೊರತೆಯಿಂದಾಗಿ ಹಲವು ರೀತಿಯ ಕಷ್ಟಗಳನ್ನು ಎದುರಿಸಬೇಕಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ ನಮ್ಮ ಭಾಗದ ಮಕ್ಕಳು ರಾಷ್ಟ್ರಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ವಿದುಷಾ ಅವರ ಕೋಚ್ ರಮೇಶ್ ಕೆಳಗೂರು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *