ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರದ ಜತೆಗೆ ದಾನಿಗಳ ನೆರವಿನಿಂದ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜತೆಗೆ ಸಮಾಜದ ಭವಿಷ್ಯಕ್ಕೆ ಹೂಡಿಕೆ ಮಾಡಿದಂತಾಗುತ್ತದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮೀನ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಾಜ ಸೇವಕರ ವತಿಯಿಂದ ಸಮವಸ್ತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು,
ದಾನ ಮಾಡುವ ಮನೋಭಾವ ಹೊಂದಿರುವವರು ಸಮಾಜದಲ್ಲಿ ವಿರಳ. ಅದರಲ್ಲೂ ಬಡ ಹಾಗೂ ಸರಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ದಾನಿಗಳ ಸೇವೆ ಶ್ಲಾಘನೀಯ. ಇಂತಹ ಸಹಕಾರದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕ ಪಿ.ಕೆ.ರಾಜು ಮಾತನಾಡಿ, ಖಾಸಗಿ ಶಾಲೆಗಳತ್ತ ಪೋಷಕರು ಹೆಚ್ಚಿನ ಒಲವು ತೋರುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಕೆಲವು ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೂ ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಹುತೇಕ ಮಕ್ಕಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದು, ಅವರಿಗೆ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೈಜೋಡಿಸಬೇಕೆಂದು ಹೇಳಿದರು.
ಎಸ್‍ಡಿಎಂಸಿ ಅಧ್ಯಕ್ಷೆ ನಮೀರಾಬಾನು, ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ, ಹಂತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಪಿ.ಜಗದೀಶ್, ಸಂಜಯ್ ಕೊಟ್ಟಿಗೆಹಾರ, ರಾಘವೇಂದ್ರ ಬಣಕಲ್, ಪ್ರವೀಣ್ ಪೂಜಾರಿ, ಪ್ರವೀಣ್ ಮತ್ತಿತರರಿದ್ದರು.


