October 8, 2026
;
suddi-12

 

 

ರಾಷ್ಟ್ರೀಯ ಹೆದ್ದಾರಿ 173 ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಹಾಗೂ ಫಲಾನುಭವಿಗಳಿಗೆ ಪರಿಹಾರ ಪಾವತಿ ಕಾರ್ಯಗಳನ್ನು ಪೂರ್ಣಗೊಳಿಸಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ   ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 173 ಮೂಡಿಗೆರೆಯಿಂದ ಮೂಗ್ತೀಹಳ್ಳಿ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹೆದ್ದಾರಿ ಅಗಲೀಕರಣ ಸಂಬಂಧ ಮರಗಳ ತೆರವು ಕಾರ್ಯ ವೇಗಗತಿಯಲ್ಲಿ ಸಾಗಬೇಕು, ಮರಗಳ ತೆರವು ಕಾರ್ಯದಲ್ಲಿ ಕೇವಲ ಕಡಿತಲೆ ಅಲ್ಲದೇ ಸ್ಥಳಾಂತರಕ್ಕೆ ಸಾಧ್ಯವಿರುವ ಮರಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಗೊಳಿಸಲು ಕ್ರಮ ವಹಿಸಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಭೂಸ್ವಾಧೀನ ಪಡಿಸಿಕೊಂಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಪರಿಹಾರ ಪಾವತಿಗೆ ಉಂಟಾಗಿರುವ ತಾಂತ್ರಿಕ ಲೋಪಗಳನ್ನು ಗಮನಿಸಿ ಶೀಘ್ರವಾಗಿ ಬಗೆಹರಿಸಿ ಹಣ ಪಾವತಿಸಬೇಕು. ತಕರಾರು ವ್ಯಕ್ತಪಡಿಸುವ ಫಲಾನುಭವಿಗಳನ್ನು ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಭೇಟಿ ಮಾಡಿ ಸಂವಹನ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದ ಅವರು, ಯಾವುದೇ ಲೋಪವಿಲ್ಲದೆ ರಸ್ತೆ ಅಗಲೀಕರಣ ಕಾಮಗಾರಿಯು ಭರದಿಂದ ಸಾಗಬೇಕು ಎಂದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಕಾಮಗಾರಿಯ ಮೊದಲ ಹಂತದ ಪ್ರಕ್ರಿಯೆಗಳಾದ ಭೂಸ್ವ್ವಾಧೀನ, ಪರಿಹಾರ ಪಾವತಿ ಹಾಗೂ ಮರ ಕಡಿತಲೆಗೆ ಇರುವ ದೋಷಾರೋಪಗಳನ್ನು ಗಮನಿಸಿ ಕಾಮಗಾರಿಗೆ ಯಾವುದೇ ಅಡಚಣೆಯಾಗದಂತೆ ಕ್ರಮವಹಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಶಶಿಕುಮಾರ್ ಸಭೆಗೆ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ 173 ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು ಒಟ್ಟು 271 ಫಲಾನುಭವಿಗಳಿದ್ದಾರೆ, ಇದರಲ್ಲಿ 27 ಸರ್ಕಾರಿ ಸರ್ವೆ ನಂಬರ್‍ಗಳಾಗಿವೆ. ಇವರೆಗೆ 107 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ ಹಾಗೂ 56 ಫಲಾನುಭವಿಗಳಿಗೆ ಕೋರ್ಟ್‍ನಲ್ಲಿ ಠೇವಣಿ ಮಾಡಲಾಗಿದೆ. ಬಾಕಿ ಇರುವ ಫಲಾನುಭವಿಗಳ ಪರಿಹಾರ ಹಣವನ್ನು ಶೀಘ್ರವಾಗಿ ನೀಡಲು ಕ್ರಮ ವಹಿಸಲಾಗುವುದು ಎಂದ ಅವರು,

ಕಾಮಗಾರಿ ಸಂಬಂಧ ಸುಮಾರು 2326 ಮರಗಳನ್ನು ತೆರವುಗೊಳಿಸಬೇಕಾಗಿದ್ದು ಮರ ತಡಿತಲೆ ಕಾರ್ಯವು ಪ್ರಗತಿಯಲ್ಲಿದೆ, ಸ್ಥಳಾಂತರಕ್ಕೆ ಸಾಧ್ಯವಿರುವ ಮರಗಳ ವ್ಯವಸ್ಥಿತ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಹಾಗೂ ಕಡಿತಲೆಯಾಗುತ್ತಿರುವ ಮರಗಳಿಗೆ ಪರ್ಯಾಯವಾಗಿ ಒಂದು ಮರಕ್ಕೆ ಹತ್ತು ಸಸಿಗಳಂತೆ ರಸ್ತೆ ಬದಿಯಲ್ಲಿ ಅಥವಾ ಅದೇ ತಾಲ್ಲೂಕಿನ ಕ್ಷೀಣಿತ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಾಗರ್, ಜಿಲ್ಲಾ ಅರಣ್ಯಾಧಿಕಾರಿ ಬೋರಯ್ಯ,  ಮುಖಂಡರಾದ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ ಮುಂತಾದವರು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *