October 8, 2026
;
suddi-9

 

 

ತೀರಾ ಶಿಥಿಲಗೊಂಡು ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದ ಬಾಳೂರು–ಹೊರನಾಡು ರಸ್ತೆಯ ಅಭಿವೃದ್ಧಿಗೆ  ಚಾಲನೆ ದೊರೆತಿದ್ದು, ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಹೊರನಾಡಿನಿಂದ ಬಾಳೂರು ಹ್ಯಾಂಡ್‍ ಪೋಸ್ಟ್ ವರೆಗೆ ಆಯ್ದ ಭಾಗದಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಕಳೆದ ಒಂದು ವರ್ಷದಿಂದ ಈ ರಸ್ತೆಯ ಹಲವು ಭಾಗಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ಸ್ಥಳೀಯರು ಮಾತ್ರವಲ್ಲದೆ ಹೊರನಾಡು ಹಾಗೂ ಕಳಸಕ್ಕೆ ಆಗಮಿಸುವ ಪ್ರವಾಸಿಗರು, ವಾಹನ ಸವಾರರು ನಿತ್ಯವೂ ಸಮಸ್ಯೆ ಎದುರಿಸುವಂತಾಗಿತ್ತು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಇದೇ ವೇಳೆ ನವೆಂಬರ್‍ನಲ್ಲಿ ಕುದುರೆಮುಖ–ಎಸ್.ಕೆ. ಬಾರ್ಡರ್ ರಸ್ತೆಯ ಕಾಮಗಾರಿಗೂ ಚಾಲನೆ ದೊರೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಮುಖಂಡರಾದ ಕೆ.ಆರ್. ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ವೀರೇಂದ್ರ, ಫಾರೂಕ್, ಸುಜಿತ್ ಬೆಳ್ಳ, ಅಬ್ದುಲ್ ಶುಕುರ್, ಗಣೇಶ್ ಭಟ್, ಪ್ರೇಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *