October 7, 2026
;
suddi-1 (2)

 

 

ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷು ಶೀಘ್ರವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಪ್ರಜಾಸೇವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಂಧನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಮೂಡಿಗೆರೆ ಪಟ್ಟಣದ ಅಡ್ಯಂತಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ `ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಮಾತನಾಡಿದ ಅವರು.ಜನರು ತಮ್ಮ ಸಮಸ್ಯಗಳಿಗೆ ಪರಿಹಾರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ತಪ್ಪಬೇಕು ಅಧಿಕರಿಗಳು ಜನರ ಬಳಿಗೆ ತೆರಳಿ ಅವರ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲಿಯೇ ಪರಿಹರ ಕಲ್ಪಿಸಬೇಕು. ಅಗತ್ಯವಿರುವ ಪ್ರಕರಣಗಳನ್ನು ಜಿಲ್ಲಾ ಮಟ್ಟಕ್ಕೆ ಹಾಗೂ ಬೆಂಗಳೂರಿನ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಕೊಂಡೊಯ್ದು ಇತ್ಯರ್ಥ ಪಡಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ನಗರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ರೈತರ ಸಮಸ್ಯೆಗಳ ವಿಚಾರದಲ್ಲಿ ವಿಳಂಬ ದೋರಣೆಯನ್ನು ಅಧಿಕಾರಿಗಳು ತೋರಬಾರದು, ಜನ ಸೇವೆಯೇ ಜನಾರ್ದನನ ಸೇವೆ, ಕ್ಷೇತ್ರದ ರೈತಾಪಿ ವರ್ಗದ ಹಿತ ಕಾಪಾಡುವುದು ಹಾಗೂ ಪ್ರತಿಯೊಬ್ಬ ಪ್ರಜೆಯ ಅಹವಾಲುಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಮ್ಮದೇ ಸಮಸ್ಯೆಗಳೆಂದು ತಿಳಿದು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಇದೊಂದು ಕಾಟಾಚಾರಕ್ಕೆ ನಡೆಯುವ ಸಭೆಯಲ್ಲ. ಜನ ಸಮಾನ್ಯರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಾಧ್ಯಂತ ಆಯೋಜಿಸಿರುವ ಕಾರ್ಯಕ್ರಮ. ಇಲ್ಲಿ ನಡೆಯುವ ಎಲ್ಲಾ ವಿಚಾರದ ಬಗ್ಗೆ ರೆಕಾರ್ಡ್ ಮಾಡಲಾಗುತ್ತದೆ. ಹವಾಮಾನ ಇಲಾಖೆಯಲ್ಲಿ ಮಳೆ ಬರಬಹುದೆಂಬ ಸಂಶಯದ ರೀತಿಯಲ್ಲಿ ಅಧಿಕಾರಿಗಳು ಉತ್ತರ ನೀಡಬಾರದು. ಇಂತಹ ಸಭೆಗಳು ಮುಂದೆ ನಿರಂತರವಾಗಿ ನಡೆಯಲಿದ್ದು, ಇಂದು ನೀಡಿದ ಅರ್ಜಿಗಳಿಗೆ ಸಮರ್ಪಕವಾದ ಉತ್ತರ ನೀಡುವ ಜತೆಗೆ ಎಲ್ಲಾ ಸಮಸ್ಯೆಗಳು ಪರಿಹರಿಸಬೇಕು. ಕಾನೂನು ತೊಡಕಿನಿಂದ ಕೆಲವೊಂದು ಸಮಸ್ಯೆಗಳು ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಅಲ್ಲದೇ ಭೂಮಿಗೆ ಸಂಬಂಧಿಸಿದ ಹಾಗೂ ಕಂದಾಯ ಇಲಾಖೆಯಲ್ಲಾಗುವ ಕಾರ್ಯವನ್ನು ಈ ಸಭೆಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೃಷಿಗಾಗಿ 10 ಎಚ್‍ಪಿವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ಅದಕ್ಕಾಗಿ 20ಸಾವಿರ ಕೋಟಿ ರೂ ಕೊಟ್ಟಿದ್ದೇವೆ. ನಿಮಗೆ ಬಿಲ್ ಬಂದಿದ್ದರೆ ಅದು ಹಳೆಯ ಬಾಕಿ ಮೊತ್ತ ಬಂದಿರಬಹುದು. ಕಂದಾಯ ಭೂಮಿ ರೆಕಾರ್ಡ್ ಇದ್ದಾಗ ಅರಣ್ಯ ಇಲಾಖೆ ಅಭಿಪ್ರಾಯ ಕೇಳಿಕೊಂಡು ಜನರಿಗೆ ತೊಂದರೆ ಕೊಡಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ, ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಲು `ಪ್ರಜಾಸೇವಾ ಆಂದೋಲನ’ದಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ಕ್ಷೇತ್ರದ ಜನರು ಸಮಾಧಾನದಿಂದ ತಮ್ಮ ಆಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಾಗಿಲಿಗೆ ಬಂತು ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ ಎಂಬ ತತ್ವದಡಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದು ಮುಖ್ಯಮಂತ್ರಿಗಳ ಕನಸಿನ ಕೂಸಾಗಿದೆ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ತಾನು ಶಾಸಕಿಯಾದ ಬಳಿಕ ಲೋಕಸಭೆ ಚುನಾವಣೆ ಬರುವವರೆಗೂ ತನ್ನ ವ್ಯಾಪ್ತಿಗೆ ಬರುವ 49 ಗ್ರಾ.ಪಂ. ಪೈಕಿ 37 ಗ್ರಾ.ಪಂ.ಯಲ್ಲಿ ಜನ ಸಂಪರ್ಕ ಸಭೆ ನಡೆಸಿ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದೇನೆ. ಆ ಸೇವೆ ಜನರಿಗೆ ಇನ್ನಷ್ಟು ಅನುಕೂಲವಾಗಲು ಇದೀಗ ಪ್ರಜಾಸೇವೆ ಮೂಲಕ ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳದೇ ಅಧಿಕಾರಿಗಳ ಮೇಲೆ ಒತ್ತಡ ಹಾಕಬಾರದು. ತನ್ನ ವ್ಯಾಪ್ತಿಯಲ್ಲಿ ಬಗೆಹರಿಸುವ ಕೆಲಸವನ್ನು ತಾನು ಮಾಡುತ್ತೇನೆ. ಸರಕಾರದ ಮಟ್ಟದಲ್ಲಿ ಪರಿಹರಿಸಲು ಸರಕಾರ ನಿಮ್ಮ ಮನೆ ಬಾಗಿಲಿಗೆ ಬಂದಿರುವ ಪ್ರಜಾಸೇವೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಆಕ್ರೋಶಗೊಳ್ಳದೆ ಅಥವಾ ಅಧಿಕಾರಿಗಳ ಮೇಲೆ ಗದ್ದಲ ಮಾಡದೆ ಸಮಾಧಾನದಿಂದ ವಿಚಾರಗಳನ್ನು ಮಂಡಿಸಬೇಕು. ಕೆಲವೊಮ್ಮೆ ಸರ್ಕಾರಿ ನೀತಿ-ನಿಯಮಗಳು ಹಾಗೂ ಪ್ರಕ್ರಿಯೆಗಳಿಗೆ ಕಾಲಾವಕಾಶದ ಅಗತ್ಯವಿರುತ್ತದೆ. ಸಾರ್ವಜನಿಕರ ಪ್ರತಿಯೊಂದು ನ್ಯಾಯಯುತ ಸಮಸ್ಯೆಗೆ ಪರಿಹಾರ ಒದಗಿಸುವುದು ನಮ್ಮ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅಭಯ ನೀಡಿದರು.

ಸಭೆಯಲ್ಲಿ ಅರ್ಜಿದಾರರು, ಪೋಡಿ ಮುಕ್ತ ಗ್ರಾಮ ಮಾಡುತ್ತೇವೆಂದು ಸರಕಾರ ಘೂಷಿಸಿತ್ತು. ಆದರೆ ಡೀಮ್ಡ್ ಅರಣ್ಯ ವೆಂಬ ಕಾರಣಕ್ಕೆ ಸಮಸ್ಯೆ ಉಂಟಾಗಿದೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಲು ಮುಂದಾಗುತ್ತಿಲ್ಲ. ಫಾರಂ ನಂ 50 ಮತ್ತು 5ಯಲ್ಲಿ ಅರ್ಜಿ ಹಾಕಿದ ಸಾವಿರಾರು ಫಲಾನುಭವಿಗಳ ಅರ್ಜಿ ವಜಾ ಮಾಡಲಾಗಿದೆ. ಈ ಬಗ್ಗೆ ಹೈ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರೂ ಪುನಃ ಅರ್ಜಿ ವಜಾ ಮಾಡಲಾಗುತ್ತಿದೆ. ಜಿ. ಹೊಸಳ್ಳಿಯಲ್ಲಿ ಮನಸ್ಸಿಗೆ ಬಂದಂತೆ ದಾಖಲೆ ಸೃಷ್ಟಿ ಮಾಡಿ, ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಜನರ ಕುಂದುಕೊರತೆಗಳ ಸ್ಪಂದನೆಗಾಗಿ ನಾಲ್ಕೈದು ಕೌಂಟರ್ಗಳನ್ನು ಸ್ಥಾಪಿಸಲಾಗಿದ್ದು, ವೇದಿಕೆ ಮುಖಾಂತರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಉತ್ತರ ಕೊಡಿಸಲಾಗುತ್ತಿದೆ. ಅಲ್ಲದೆ, ಸ್ಥಳದಲ್ಲೇ ಪರಿಹರಿಸಲಾಗದ ಸಮಸ್ಯೆಗಳ ಕುರಿತು ಇಲಾಖಾ ಮಟ್ಟದಲ್ಲಿ ಆಕ್ಷನ್ ಪ್ಲಾನ್ ರೂಪಿಸಿ, ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಈವರೆಗೆ ನಡೆದಿರುವ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಗಳಲ್ಲಿ ಒಟ್ಟು 1,003 ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳಲ್ಲಿ ನೆನ್ನೆ ಮಧ್ಯಾಹ್ನದ ಮಾಹಿತಿಯಂತೆ 761 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ 243 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಪ್ರತಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಇವುಗಳ ಪರೀಶೀಲನೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.

 

ಸೈನಿಕ್ ಸಮ್ಮಾನ್ ಯೋಜನೆಯಲ್ಲಿ ಮಾಜಿ ಸೈನಿಕರಿಗೆ ಆದ್ಯತೆ ಮೇರೆಗೆ ಮೊದಲು ಜಾಗ, ನಂತರ ನಿವೇಶನ ಕೊಡಬೇಕೆಂದು ಸರಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿ ಸುಮಾರು 500 ಅರ್ಜಿ ಬಂದಿದ್ದು, ಮೂಡಿಗೆರೆ ತಾಲೂಕಿನಿಂದ 58 ಮಂದಿ ಅರ್ಜಿ ನೀಡಿದ್ದಾರೆ. ಅಕ್ಟೋಬರ್ 15 ರೊಳಗೆ ತಹಸೀಲ್ದಾರ್‍ನಿಂದ ಪಟ್ಟಿ ಪಡೆದು, ನವೆಂಬರ್ ಅಂತ್ಯದಲ್ಲಿ ನಿವೇಶನ ಕೊಡಲು ಕ್ರಮ ವಹಿಸಲಾಗುವುದೆಂದು ಹೇಳಿದರು.

ಇಂದು ನಡೆದ ಸಭೆಯಲ್ಲಿ ಬಹುತೇಕ ಅರ್ಜಿಗಳು ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಹಾಗೂ ಡೀಮ್ಡ್ ಅರಣ್ಯ, ಹಕ್ಕು ಪತ್ರ, ಬಡಾವಣೆ ಮೂಲ ಸೌಕರ್ಯ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಸಲ್ಲಿಕೆಯಾದವು

ವೇದಿಕೆಯಲ್ಲಿ ಎಂಎಲ್‍ಸಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವೆ ಮೋಟಮ್ಮ, ಅಪಾರ ಜಿಲ್ಲಾಧಿಕಾರಿ ನಂಜುಡೆಗೌಡ, ಪೊಲೀಸ್ ಜಿಲ್ಲಾ ಅಧೀಕ್ಷಕ ಜಿತೇಂದ್ರ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಬಿ.ಶಂಕರ್, ಡಿಎಫ್‍ಒ ಬೋರೇಗೌಡ, ಭದ್ರಹುಲಿ ಸಂರಕ್ಷಣ ಡಿಎಫ್‍ಒ ಪುಲಿಕಿತ್ ಮೀನಾ, ಕೊಪ್ಪ ಡಿಎಫ್‍ಒ ಶಿವಶಂಕರ್, ತಹಸೀಲ್ದಾರ್ ಎಸ್.ಅಶ್ವಿನಿ, ಎಸಿಎಫ್ ಆಕರ್ಷ್ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *