October 14, 2026
;
anna seve2

 

 

ಅನ್ನ ಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಸ್ವತಃ e-KYC (Know Your Customer) ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ‘ಅನ್ನ ಸೇವೆ’ ಮೊಬೈಲ್ ಆ್ಯಪ್‌ ಇಂದು ಬುಧವಾರದಿಂದ ರಾಜ್ಯಾದ್ಯಂತ ಲಭ್ಯವಾಗಲಿದೆ.

ಈ ಸಂಬಂಧ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಮೊಬೈಲ್ ಆ್ಯಪ್‌ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1 ರಂದು ಬಿಡುಗಡೆ ಮಾಡಿದ್ದರು.

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಲಭ್ಯವಿತ್ತು. ಅಕ್ಟೋಬರ್​ 14 ರಿಂದ ಉಳಿದ ಜಿಲ್ಲೆಗಳ ಫಲಾನುಭವಿಗಳೂ ಸಹ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು e-KYC ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಿದೆ.

ಫಲಾನುಭವಿಗಳು Google Play Storeನಿಂದ ‘ಅನ್ನ ಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, UIDAI Face Authentication ಮೂಲಕ ಸ್ವಯಂ e-KYC ಪೂರ್ಣಗೊಳಿಸಬಹುದಾಗಿದೆ. ಅನ್ನ ಭಾಗ್ಯದ ಬಹುತೇಕ ಫಲಾನುಭವಿಗಳು   KYC ಪೂರ್ಣಗೊಳಿಸಲು   ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಿತ್ತು. ‘ಅನ್ನ ಸೇವೆ’ ಆ್ಯಪ್‌ ಈ ತೊಂದರೆಗಳನ್ನು ನಿವಾರಿಸುವುದರ ಜೊತೆಗೆ, e-KYC ಪ್ರಕ್ರಿಯೆಯನ್ನು ಸರಳ ಹಾಗು ಅನುಕೂಲಕರವಾಗಿಸಲಿದೆ.

‘ಅನ್ನಸೇವೆ’ ಆ್ಯಪ್​ಗೆ ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಅಕ್ಟೋಬರ್ 1 ರಿಂದ ಅಕ್ಟೋಬರ್ 12 ರವರೆಗೆ ಎಂಟು ಜಿಲ್ಲೆಗಳ ಒಟ್ಟು 1,60,267 ಫಲಾನುಭವಿಗಳು ಈ ಆ್ಯಪ್ ಉಪಯೋಗಿಸಿ e-KYC ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಆ್ಯಪ್ ಬುಧವಾರದಿಂದ ಎಲ್ಲ ಜಿಲ್ಲೆಗಳಲ್ಲೂ ಲಭ್ಯವಿರಲಿದೆ.

e-KYC ಮಾಡಿಸಬೇಕಾದ ರಾಜ್ಯದ 2.67,64,276 ಫಲಾನುಭವಿಗಳ ಪೈಕಿ ಅಕ್ಟೋಬರ್ 12 ರವರೆಗೆ 2,06,76,278 ಫಲಾನುಭವಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಒಂದು ವರ್ಷದ ಮೊದಲು e-KYC ಮಾಡಿಸಿದ್ದ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗಿ e-KYC ಮಾಡಿಸಬೇಕು.

ಅಕ್ಟೋಬರ್ 20 e-KYC ಮಾಡಿಸಲು ಕೊನೆಯ ದಿನ ಎಂದು ಇಲಾಖೆ ತಿಳಿಸಿದೆ.

ಉಳಿದ ಫಲಾನುಭವಿಗಳು ‘ಅನ್ನಸೇವೆ’ ಆ್ಯಪ್​ನ ಲಾಭ ಪಡೆದು ಆದಷ್ಟು ಬೇಗನೆ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಆಹಾರ, ನಾಗರೀಕ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *