October 14, 2026
;
premada urali

 

 

ಯುವ ನಿರ್ದೇಶಕ  ಮನೋಜ್ ಕುಮಾರ್ ನಿರ್ದೇಶನದ “ಪ್ರೇಮದ ಊರಲಿ” ಚಿತ್ರ ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್ಯದಾದ್ಯಂತ ಸಿನಿ ಮಂದಿರಗಳಲ್ಲಿ ಹೌಸ್ ಫುಲ್ ಆಗಿದೆ.

ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದು ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

‘ಅಕ್ಷಿ’ ಎಂಬ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ನಿರ್ದೇಶನದ ಈ ಹೊಸ ಕಥೆ ಟಿಕೆಟಿಂಗ್​ ಪ್ಲಾಟ್​ಫಾರ್ಮ್​ ಬುಕ್‌ಮೈಶೋನಲ್ಲಿ ಬಿರುಗಾಳಿಯೆಬ್ಬಿಸುತ್ತಿದ್ದು, ಪ್ರತೀ ಗಂಟೆಗೆ 15,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗುತ್ತಿವೆ. ಆನ್‌ಲೈನ್ ಬುಕಿಂಗ್‌ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುತ್ತಿದೆ.

ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಲೇ ಪ್ರತಿದಿನ ಗಳಿಕೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಿನಿಮಾ,   ಕನ್ನಡದ ಸಣ್ಣ ಬಜೆಟ್ ಚಿತ್ರವೊಂದು ಗಲ್ಲಾಪೆಟ್ಟಿಗೆಯಲ್ಲಿ ಪ್ರತಿದಿನ ಉತ್ತಮ ವ್ಯವಹಾರ ನಡೆಸುತ್ತಿದೆ

ವೀಕೆಂಡ್‌ನಲ್ಲಿ ಈಗಾಗಲೇ ಹೌಸ್‌ಫುಲ್ ಬೋರ್ಡ್‌ಗಳು ಬಿದ್ದು ಸಿನಿಮಾ ಅತ್ಯುತ್ತಮ ಪ್ರದರ್ಶನ ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ವೀಕೆಂಡ್ ಪ್ರದರ್ಶನಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗಿ ಗಮನ ಸೆಳೆದಿತ್ತು. ಇದೀಗ ವಾರದ ದಿನಗಳಲ್ಲಿಯೂ ಉತ್ತಮ ವ್ಯವಹಾರ ನಡೆಸುತ್ತಿರುವುದು ಸ್ಯಾಂಡಲ್​ವುಡ್​ನಲ್ಲಿ ಹೊಸ ಭರವಸೆ ಮೂಡಿಸಿದೆ.

ಅಕ್ಟೋಬರ್ 12ರಂದು ಬುಕ್‌ಮೈಶೋನಲ್ಲಿ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಭಾರತದಲ್ಲೇ ಅತ್ಯಧಿಕ ಟಿಕೆಟ್ ಮಾರಾಟವಾದ ಚಿತ್ರವಾಗಿ ಹೊರಹೊಮ್ಮಿದೆ.

ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಮತ್ತು ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ಸಿನಿಮಾವನ್ನು ಮನೋಜ್​ ಕುಮಾರ್​ ನಿರ್ದೇಶಿಸಿದ್ದಾರೆ. ವೆನಿಲ್ಲಾ ಎಂಟರ್ಟೈನ್ಮೆಂಟ್ಸ್, ಜಾನಕಮ್ಮ ಪ್ರೊಡಕ್ಷನ್ ಬ್ಯಾನರ್​ ಬ್ಯಾನರ್​ ಅಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ.

ಸುನಾದ್ ಗೌತಮ್ ಸಂಗೀತ ನಿರ್ದೇಶನ, ರಾಜ್​ಕಾಂತ್ ಎಸ್.ಕೆ. ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನ ಈ ಸಿನಿಮಾಗಿದೆ. ಸೆಪ್ಟಂಬರ್ 25ರಂದು ಕರ್ನಾಟಕದಲ್ಲಿ ತೆರೆಕಂಡ ಈ ಸಿನಿಮಾ ಅಕ್ಟೋಬರ್ 9ರಂದು ಭಾರತದ ಹಲವು ಪ್ರಮುಖ ನಗರಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಬಿಡುಗಡೆಯಾಗಿ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ ಪಡೆಯುತ್ತಿದೆ.

ಈ ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬೈರೇಗೌಡನಕೊಪ್ಪಲಿನವರು. ಇವರು ಓದಿದ್ದು ಮತ್ತು ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದಲ್ಲಿ. ಇವರ ಕುಟುಂಬಕ್ಕೆ ಯಾವುದೇ ರೀತಿಯ ಚಲನಚಿತ್ರ ಹಿನ್ನೆಲೆ ಇರಲಿಲ್ಲ.

18 ವರ್ಷಗಳ ಹಿಂದೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಟಾರ್ಚ್‌ಬಾಯ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ಅಡುಗೆ ಮಾಡುವ ಕೆಲಸಕ್ಕೂ ಹೋಗುತ್ತಿದ್ದರು. ನಂತರ ಸಹನಿರ್ದೇಶಕನಾಗಿ ಕೆಲಸ ಮಾಡಿ ತಮ್ಮದೇ ನಿರ್ದೇಶನದ  ಇವರ ಮೊದಲ ಚಿತ್ರ ‘ಅಕ್ಷಿ’ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಇದೀಗ ಅವರ ನಿರ್ದೇಶನದ ಎರಡನೇ ಚಿತ್ರ ರಾಜ್ಯ ಮಾತ್ರವಲ್ಲ ರಾಷ್ಟ್ರದಾದ್ಯಂತ ಹೆಸರು ಮಾಡುತ್ತಿದೆ. ನವಿರಾದ ಪ್ರೇಮಕಥೆ, ಮನಸೆಳೆವ ಹಾಡುಗಳು, ಅಬ್ಬರ ಆಡಂಬರವಿಲ್ಲದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಿ ಮುನ್ನುಗುತ್ತಿದೆ.

ಮಲೆನಾಡಿನ ಸಾಮಾನ್ಯ ಕುಟುಂಬದ ಯುವಕನ ಸೃಜನಶೀಲ ಪ್ರತಿಭೆ ಈ ಚಿತ್ರದ ಮೂಲಕ ಅನಾವರಣಗೊಂಡಿದೆ.

 

 

Leave a Reply

Your email address will not be published. Required fields are marked *