October 17, 2026
;
suddi8

 

 

ಕಸ್ತೂರಿ ರಂಗನ್ ವರದಿ ಮೂಲಕ ರೈತರು ಮತ್ತು ಕಾರ್ಮಿಕರನ್ನು ಅವರ ನೆಲದಿಂದ ಒಕ್ಕಲೆಬ್ಬಿಸದಂತೆ ರಕ್ಷಿಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ದೆಹಲಿಯಲ್ಲಿ ಹೋರಾಟ ನಡೆಸಲು ಸಿದ್ಧರಾಗಬೇಕೆಂದು ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯಾಧ್ಯಕ್ಷ ಸಿ.ಕೆ.ಜಗನ್ ಕರೆ ನೀಡಿದರು.

ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ 6 ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಮಸ್ಯೆ ಎದುರಾಗಿದ್ದು, ರಾಜ್ಯದಲ್ಲಿ ಚಿಕ್ಕಮಗಳೂರು ಸೇರಿದಂತೆ 10 ಜಿಲ್ಲೆಗಳು ಇದರ ವ್ಯಾಪ್ತಿಗೆ ಒಳಪಟ್ಟಿವೆ. ನೂರಾರು ವರ್ಷದಿಂದ ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡು ಕೃಷಿ ಮತ್ತು ಕೂಲಿ ಕೆಲಸದ ಮೂಲಕ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿವೆ. ಈಗ ರಾಜ್ಯ ಸರಕಾರ 7ನೇ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳದೇ ಕೇಂದ್ರ ಸರಕಾರದಿಂದ 1 ವರ್ಷ ಕಾಲಾವಕಾಶ ಕೂರಿರುವುದು. ಇದೊಂದು ಜನತೆಯ ಕಣ್ಣೊರೆಸುವ ತಂತ್ರ. ರಾಜಕಾರಣಿಗಳು ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ ಎಂದು ನುಣುಚಿಕೊಳ್ಳುವುದನ್ನು ಬಿಟ್ಟು, ಸಂಸತ್‍ನಲ್ಲಿ ಜನಪರವಾದ ಕಾನೂನು ರೂಪಿಸಿದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲವೆಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ 2012ರಿಂದ 2026ರವರೆಗೆ 11 ಬಾರಿ ಕೇಂದ್ರ ಸರಕಾರ ಪರಿಸರ ಇಲಾಖೆ ಸಭೆ  ಕರೆದಿದ್ದರೂ ಓರ್ವ ಸಂಸದರು ಪಾಲ್ಗೊಂಡಿರಲಿಲ್ಲ. ಜನಪ್ರತಿನಿಧಿಗಳು ಮಾಡುವ ತಪ್ಪಿಗೆ ಜನಸಾಮಾನ್ಯರು ಬಲಿಯಾಗಬೇಕಾಗಿದೆ. ಇಲ್ಲಿನ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಿಜವಾಗಿಯೂ ರೈತರ ಮತ್ತು ಕಾರ್ಮಿಕರ ಮೇಲೆ ಕಾಳಜಿ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರೈತರ ಹಾಗೂ ಕಾರ್ಮಿಕರ ನೆರವಿಗೆ ನಿಲ್ಲಬೇಕೆಂದು  ಒತ್ತಾಯಿಸಿದ ಅವರು, ಈಗಾಗಲೇ ವೇದಿಕೆಯಿಂದ ದೆಹಲಿಯಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  ಅದಕ್ಕಾಗಿ ಸಹಿ ಸಂಗ್ರಹದ ಮೂಲಕ ಸುಪ್ರೀಂ ಕೋರ್ಟ್‍ಗೆ ವಕೀಲರ ಮೂಲಕ ಪ್ರಮಾಣ ಪತ್ರ ಸಲ್ಲಿಸಿ, ನಮ್ಮ ನೆಲ, ಹಕ್ಕು ಉಳಿಸಿಕೊಳ್ಳಲು ಎಲ್ಲಾ ಪಕ್ಷ, ಸಂಘಟನೆಗಳು, ರೈತರು, ಕಾರ್ಮಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ವೇದಿಕೆಯ ಗೌರವಾಧ್ಯಕ್ಷ ಎಚ್.ಪಿ.ಸೋಮಶೇಖರ್, ಕರ್ನಾಟಕ ಹಿಂದುಳಿದ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ದೀಪಕ್, ರಾಜ್ಯ ಕಾರ್ಯಾಧ್ಯಕ್ಷ ರೇಣುಕುಮಾರ್ ಗೌತಳ್ಳಿ, ರಾಜ್ಯ ಸಮಿತಿ ಸಂಚಾಲಕ ದಿನೇಶ್ ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *