October 17, 2026
;
suddi4

 

 

ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಜಿತವಾಗಿ ಹಾಗೂ ದೋಷ ರಹಿತವಾಗಿ ನಡೆಸುವುದು ಅತ್ಯಂತ ಮಹತ್ವವಾಗಿದ್ದು ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕೆಸ್ವಾನ್ ನಲ್ಲಿ ಮಂಗಳವಾರ ಜನನ ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಜನನ-ಮರಣ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ ಹೊಂದಿರಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಅಥವಾ ಕಾರಣಗಳನ್ನು ಒಪ್ಪಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನನ ಮತ್ತು ಮರಣ ನೋಂದಣಿ ಸರಿಯಾದ ಸಂದರ್ಭದಲ್ಲಿ ಹಾಗೂ ನಿಗದಿತ ಅವಧಿಯೊಳಗೆ ನಡೆಯುವಂತೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಎದುರಾಗುವ ಅಡೆತಡೆಗಳನ್ನು ಸಭೆಯ ಗಮನಕ್ಕೆ ತಂದು ಅವುಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು.

ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು ಜನನ ಮತ್ತು ಮರಣ ನೋಂದಣಿಯು ಮುಂದಿನ ದಿನಗಳಲ್ಲಿ ನಾಗರಿಕರಿಗೆ ಅಗತ್ಯವಾದ ವಿವಿಧ ದಾಖಲೆಗಳನ್ನು ಸರ್ಕಾರಿ ಸೌಲಭ್ಯಗಳು ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಮೂಲ ಆಧಾರವಾಗಿರುವುದರಿಂದ ಈ ಕಾರ್ಯದಲ್ಲಿ ನಿರ್ಲಕ್ಷಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣೆ ಅಧಿಕಾರಿ ಶಿವಕುಮಾರ್ ಸಭೆಗೆ ಮಾಹಿತಿ ನೀಡಿ ಜನನ ಮರಣ ಹಾಗೂ ನಿರ್ಜೀವ ಶಿಶುಗಳ ಜನನ ನಡೆದ 21 ದಿನಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೆ 21 ರಿಂದ 30 ದಿನಗಳೊಳಗೆ  ರೂ.20 ಶುಲ್ಕ ನೀಡಿ ನಂತರ ಒಂದು ವರ್ಷದ ಅವಧಿ ಒಳಗೆ ರೂ.150 ಶುಲ್ಕ ಪಾವತಿಸಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಒಂದು ವರ್ಷದ ನಂತರ ವಿಳಂಬ ನೋಂದಣಿಯನ್ನು ನ್ಯಾಯಾಲಯದ ಆದೇಶ ಪಡೆದು ಮಾಡಬಹುದಾಗಿದೆ. ಜನನ ಮರಣ ಮಾಹಿತಿಯನ್ನು ಈ ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು ಜಾರಿಗೆ ತರಲಾಗಿದ್ದು ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಜನ್ಮ ತಂತ್ರಾಂಶದಲ್ಲಿ ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು

 

 

Leave a Reply

Your email address will not be published. Required fields are marked *