ಮಲೆನಾಡಿನ ಸಂಸ್ಕøತಿ ಮತ್ತು ಪರಂಪರೆಯಲ್ಲಿ ಕೋಲಾಟಕ್ಕೆ ಅವಿನಾಭಾವ ಸಂಬಂಧವಿದೆ. ಈ ಸಾಂಪ್ರದಾಯಿಕ ಕಲೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದುರ್ಗಾದೇವಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ದಾಂಡಿಯಾ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಭಾನುವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಸೇವಾ ಸಮಿತಿ ಹಾಗೂ ತ್ರಿನಿಟಿ ಸ್ಕೂಲ್ ಆಫ್ ಡ್ಯಾನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನವರಾತ್ರಿ ಶ್ರೀ ದುರ್ಗಾದೇವಿಗೆ ಮುಡುಪಾಗಿಟ್ಟಿರುವ ದಿನವಾಗಿದೆ. ಇಂತಹ ಹೊತ್ತಲ್ಲಿ ಮಹಿಳೆಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ನವರಾತ್ರಿ ಉತ್ಸವವನ್ನು ಸಂಭ್ರಮಿಸುವ ಜತೆಗೆ ನಮ್ಮ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಮಕ್ಕಳು ಸೇರಿದಂತೆ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು, ದಾಂಡಿಯಾ ವಸ್ತ್ರ ಧರಿಸಿ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಅಲ್ಲದೇ ಶಾಸಕಿ ನಯನಾ ಮೋಟಮ್ಮ ಅವರು ಕೂಡ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ತ್ರಿನಿಟಿ ಸ್ಕೂಲ್ ಆಫ್ ಡ್ಯಾನ್ಸ್ ಮಾಸ್ಟರ್ ಜೀವನ್, ಖ್ಯಾತ ನೃತ್ಯ ಕಲಾವಿದೆ ನಿರೀಕ್ಷಾ, ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ. ಮಂಚೇಗೌಡ, ಶ್ರೀಮತಿ ನಿರ್ಮಲಾ ಮಂಚೇಗೌಡ ಮತ್ತಿತರರಿದ್ದರು.



