ಪಾಂಡಿಚೇರಿಯಲ್ಲಿ ನಡೆದ 37ನೇ ಸೌತ್ ಝೋನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಅಂಡರ್-20 ಪುರುಷರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 64.16 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಗಳಿಸಿ, ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದ ಬಾಳೆಹೊನ್ನೂರಿನ ಹೆಮ್ಮೆಯ ಯುವ ಕ್ರೀಡಾಪಟು ಮೊಹಮ್ಮದ್ ಸಾಲೀಂ ಅವರನ್ನು ಬಾಳೆಹೊನ್ನೂರು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ, ಗೌರವಪೂರ್ವಕವಾಗಿ ಧನಸಹಾಯ ನೀಡಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಎಂ. ಯೋಗೇಶ್ ಗೌಡ ಅವರು, ಮಲೆನಾಡಿನ ಯುವಕ ಸಾಲೀಂ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದರು. ಅವರ ಸಾಧನೆಯ ಹಿಂದೆ ಇರುವ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡೆಯ ಬಗೆಗಿನ ಬದ್ಧತೆ ಇತರ ಯುವಜನರಿಗೆ ಆದರ್ಶಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಲೀಂ ಅವರು, ಲಯನ್ಸ್ ಕ್ಲಬ್ ನೀಡಿದ ಗೌರವ ಮತ್ತು ಸಹಕಾರವು ತಮ್ಮಲ್ಲಿ ಮತ್ತಷ್ಟು ಸಾಧನೆ ಮಾಡುವ ಆತ್ಮವಿಶ್ವಾಸ ಹಾಗೂ ಪ್ರೇರಣೆಯನ್ನು ತುಂಬಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಶಿವರಾಮ್ ಅವರು ಮಾತನಾಡಿ, ಸಾಲೀಂ ಅವರ ಕ್ರೀಡಾ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು. ಹಿರಿಯ ಸದಸ್ಯರಾದ ಬಿ. ಎಸ್. ಶ್ರೀನಿವಾಸ್ ಅವರು, ನಮ್ಮೂರಿನ ಯುವಕನ ಸಾಧನೆಯಿಂದ ಬಾಳೆಹೊನ್ನೂರಿನ ಕೀರ್ತಿ ಮತ್ತಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರಾದ ಎಂ. ವಿ. ಶ್ರೀನಿವಾಸ್ ಗೌಡ, ಜಯಪ್ರಕಾಶ್, ಶರತ್ ಕುಮಾರ್, ವಿಜಯ್ , ರವೀಂದ್ರ ಕೊಬಡೆ, ಸುಧಾಕರ್, ರತೀಶ್ ಕಿಬ್ಳಿ , ಹಾಗೂ ಶಾಮಣ್ಣ ಮಂಡ್ಲಗಾರ್ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ. ಸಿ. ಕೃಷ್ಣಮೂರ್ತಿ ಅಡ್ಡೋಣಿ ಅವರು ಸ್ವಾಗತಿಸಿದರು. ಖಜಾಂಚಿ ಮಧುಕುಮಾರ್ ಅವರು ವಂದಿಸಿದರು.
ಬಾಳೆಹೊನ್ನೂರಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಸಾಲೀಂ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಕ್ರೀಡಾ ಪಯಣ ಮತ್ತಷ್ಟು ಯಶಸ್ಸಿನ ಶಿಖರಗಳನ್ನು ತಲುಪಲಿ ಎಂಬುದು ಲಯನ್ಸ್ ಕ್ಲಬ್ನ ಆಶಯವಾಗಿದೆ.


