ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಕೇಂದ್ರವು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಗುರುವಾರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕೇಂದ್ರ ಆರಂಭವಾದ ಬಳಿಕ ಸಾರ್ವಜನಿಕರು ಇದರ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಎದುರಾದಾಗ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಶಿಶಿಲ–ಬೈರಾಪುರ ರಸ್ತೆ ನಿರ್ಮಾಣದ ಕುರಿತು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ರಸ್ತೆ ನಿರ್ಮಾಣಕ್ಕೆ ತಮ್ಮ ಸಹಮತವಿದ್ದು, ಮಳೆಗಾಲದಲ್ಲಿ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ಬಂದ್ ಆಗುವ ಸಂದರ್ಭದಲ್ಲಿ ಕರಾವಳಿ ಪ್ರದೇಶಕ್ಕೆ ತೆರಳಲು ಈ ರಸ್ತೆ ಅನುಕೂಲವಾಗಲಿದೆ. ತುರ್ತು ಆರೋಗ್ಯ ಸೇವೆಗೂ ಈ ಮಾರ್ಗ ಅನುಕೂಲವಾಗಲಿದೆ. ಈಗಾಗಲೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಸ್ಥಿತಿ ಪರಿಶೀಲಿಸಿದ್ದಾರೆ. ಈ ಕುರಿತು ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದು, ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ, ಮೂಡಿಗೆರೆ ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಗೌಡಹಳ್ಳಿ ಸಹಕಾರ ಸಂಘದ ಅಧ್ಯಕ್ಷ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್, ಗ್ರಾ.ಪಂ. ಮಾಜಿ ಸದಸ್ಯರಾದ ಅಭಿಷೇಕ್, ಸುಚಿತ್ರ ಪ್ರಸನ್ನ, ಚಂದ್ರೇಗೌಡ, ಮುಖಂಡರಾದ ನಿಶಾಂತ್ ಪಟೇಲ್, ಕಾಂಗ್ರೇಸ್ ಹೋಬಳಿ ಮತ್ತು ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ಪಿಡಿಓ ಇಂತೇಶ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೌಡಹಳ್ಳಿ ಸಹಕಾರ ಸಂಘದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿ ಗುಣಮಟ್ಟದ ರಸ್ತೆ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಸಹಕಾರ ಸಂಘದ ವತಿಯಿಂದ ಶಾಸಕಿ ನಯನ ಮೋಟಮ್ಮ ಅವರನ್ನು ಸನ್ಮಾನಿಸಲಾಯಿತು.


