October 30, 2026
;
29Mudigere1A

 

 

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರದಲ್ಲಿ ನಡೆದ ಶಿಕ್ಷಣ ಮತ್ತು ಪದವೀಧರ ಕ್ಷೇತ್ರಗಳ 4 ವಿಧಾನ ಪರಿಷತ್ ಸ್ಥಾನಗಳಲ್ಲಿ ಎನ್‍ಡಿಎ ಮೈತ್ರಿಕೂಟ ಜಯಗಳಿಸಿರುವುದು ಮೈತ್ರಿಕೂಟದ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಮುಖಂಡ ವಿಜಯಕುಮಾರ್ ಹೇಳಿದರು.
ಅವರು ಗುರುವಾರ ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಎನ್‍ಡಿಎ ಮೈತ್ರಿಕೂಟದ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು. ಈ ಚುನಾವಣೆ ಫಲಿತಾಂಶವು ರಾಜ್ಯದ ಜನತೆ ಎನ್‍ಡಿಎ ಮೈತ್ರಿಕೂಟದತ್ತ ಒಲವು ತೋರುತ್ತಿರುವುದು ಸ್ಪಷ್ಟವಾಗಿದೆ. ಇದರಿಂದ ಕಾಂಗ್ರೆಸ್ ನಾಯಕರಲ್ಲಿ ಆತಂಕ ಹಾಗೂ ಭಯ ಮೂಡಿಸಿದ್ದು, 2028ರ ವಿಧಾನಸಭೆ ಚುನಾವಣೆ ಹಾಗೂ ಮುಂಬರುವ ತಾ.ಪಂ. ಹಾಗೂ ಜಿ.ಪಂ ಚುನಾವಣೆ ಗೆಲುವಿಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ. ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವಿಲ್ಲವೆಂದು ಭವಿಷ್ಯ ನುಡಿದರು.
ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಕಾಂಗ್ರೆಸ್ ನಾಯಕರು ಇವಿಎಂ ಯಂತ್ರಗಳ ಮೂಲಕ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂಬ ಆರೋಪ ಮಾಡುತ್ತಿದ್ದರು. ಆದರೆ ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲಿಯೂ ಎನ್‍ಡಿಎ ಮೈತ್ರಿಕೂಟ ಜಯಗಳಿಸಿದೆ. ಇದರಿಂದ ಇವಿಎಂ ಮೂಲಕವೇ ಗೆಲುವು ಸಾಧಿಸಲಾಗುತ್ತದೆ ಎಂಬ ಆರೋಪಕ್ಕೆ ಉತ್ತರ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಬಳಿಕ ಲಯನ್ಸ್ ವೃತ್ತದಲ್ಲಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಎಸ್.ಲಕ್ಷ್ಮಣ್‍ಗೌಡ, ರಾಜೇಂದ್ರ ಕಣಚೂರು, ಲೋಹಿತ್ ಬಿದರಹಳ್ಳಿ, ರವಿ ವಸ್ತಾರೆ, ಎಂ.ಸಿ.ಹೂವಪ್ಪ, ಮಹಮ್ಮದ್ ನೂರುಲ್ಲಾ, ಧರ್ಮೇಶ್, ಶಂಕರ್ ಜಕ್ಲಿ, ರಿಜ್ವಾನ್, ಚಂದು ನಿಡುವಾಳೆ, ಜಗನ್ನಾಥ್, ಅನಿಲ್, ನಿಕಿಲ್ ಮರಿಗೌಡ, ಮಹೇಶ್, ಎಂ.ಡಿ.ಮಂಜುನಾಥ್ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *