ಇಂದಿನ ಯುವ ಪೀಳಿಗೆ ಭವಿಷ್ಯದ ಉತ್ತಮ ಪ್ರಜೆಯಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಬ್ಯಾಸದ ಕಡೆಗೆ ಹೆಚ್ಚು ಗಮನಹರಿಸುವಂತೆ ಹೆಚ್ಚುವರಿ ಸಿವಿಲ್ ನ್ಯಾಯಾಧಿಶರು ಮತ್ತು ಜೆಎಂಎಫ್ ಶ್ರೀಮತಿ ಸುರಕ್ಷಾ ಕೆ.ಕೆ. ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ,ವಕೀಲರ ಸಂಘ, ಶಾಲಾಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಮತ್ತು ಸ್ವಸ್ಥ್ಯ ಮಾರ್ಗದರ್ಶನದ ಅಂಗವಾಗಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೇ ನೀಡಿ ಮಾತನಾಡಿದ ಅವರು.. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದರು.
ಮಾದಕ ವಸ್ತುಗಳ ಸೇವನೆಗೆ ಹೆಚ್ಚಾಗಿ ವಿದ್ಯಾರ್ಥಿಗಳೇ ದಾಸರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಮಾಡಿಕೊಳ್ಳುವ ಸ್ನೇಹಿತ ವರ್ಗ ಅಥವಾ ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸದೇ ಇರವುದು. ದೇಶದ ಮುಂದಿನ ಶಕ್ತಿಯಾಗಬೇಕಿರುವ ಯುವ ಜನತೆ ಇಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ಅದರಿಂದ ಸದಾ ದೂರವಿರಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನಗೆ ಮೊದಲ ಆದ್ಯತೆ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಸ್ನೇಹಿತರ ಒತ್ತಾಯಕ್ಕೆ ಅಥವಾ ಕುತೂಹಲಕ್ಕೆ ಮಣಿಯದೆ ಮಾದಕ ವಸ್ತುಗಳನ್ನು ಸ್ಪಷ್ಟವಾಗಿ ನಿರಾಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆ, ಸಂಗೀತ, ಓದು, ಯೋಗ ಅಥವಾ ಧ್ಯಾನದಂತಹ ಉತ್ತಮ ಹವ್ಯಾಸಗಳಲ್ಲಿ ಸಮಯವನ್ನು ಕಳೆಯುವುದರಿಂದ ಒತ್ತಡವನ್ನು ನಿಭಾಯಿಸಬಹುದು. ಒಳ್ಳೆಯ ಆಲೋಚನೆಗಳನ್ನು ಹೊಂದಿರುವ ಮತ್ತು ಗುರಿಯತ್ತ ಪ್ರೇರೇಪಿಸುವ ಸ್ನೇಹಿತರ ಸಹವಾಸವನ್ನು ಬೆಳೆಸಿಕೊಳ್ಳಬೇಕು. ಯಾವುದೇ ರೀತಿಯ ಮಾನಸಿಕ ಒತ್ತಡ ಅಥವಾ ಗೊಂದಲಗಳಿದ್ದಾಗ ಪೋಷಕರು, ಶಿಕ್ಷಕರು ಅಥವಾ ಆಪ್ತ ಸಮಾಲೋಚಕರೊಂದಿಗೆ ಮುಕ್ತವಾಗಿ ಮಾತನಾಡಬೇಕು. ಎಂದರು.
ಕಾಣೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಶಿಕ್ಷಕರು,ಪೊಲೀಸ್ ಠಾಣೆ ಅಥವಾ ಪೋಷಕರ ಗಮನಕ್ಕೆ ತರುವುದರೊಂದಿಗೆ ಕಾನೂನು ಬಾಹಿರ ಚಟುವಟಿಕೆ ತಡೆಯುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಹೆ.ಕೆ.ರಘು ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಶ್ರೀಮತಿ ಅರ್ಪಿತ ಕೆ.ಎಸ್. ಉಪಾಧ್ಯಕ್ಷರಾದ ಎಂ.ಎಂ.ರಾಘವೇಂದ್ರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ರಕ್ಷಿತ್ ಬಿ.ಆರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮ್ಯಾರಥಾನ್ ನಲ್ಲಿ ೨೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


