ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಲ್ಲಿನ ರೈತರು ಬಾಂಕುಗಳಿಂದ ಕೃಷಿ ಉದ್ದೇಶಕ್ಕೆ ಪಡೆದಿರುವ ಸಾಲದ ಬಾಕಿಯನ್ನು ವಸೂಲಿಮಾಡಲು ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಬ್ಯಾಂಕ್ಗಳ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಲೀಡ್ಬ್ಯಾಂಕ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಹವಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಕಡೂರು, ಅಜ್ಜಂಪುರ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಹಾಗೂ ತರೀಕೆರೆ, ಎನ್.ಆರ್.ಪುರ ಮತ್ತು ಕಳಸ ತಾಲ್ಲೂಕುಗಳನ್ನು ಮಧ್ಯಮ ಪ್ರಮಾಣದ ಬರ ಪೀಡಿತ ತಾಲ್ಲೂಕುಗಳಾಗಿ ಘೋಷಿಸಲಾಗಿದೆ. ಈ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಮತ್ತು ಕೃಷಿ ಆಧಾರಿತ ಉಧ್ಯಮಗಳಿಗೆ ರೈತರು ಪಡೆದಿರುವ ಸಾಲದ ಕಂತುಗಳನ್ನು ಒತ್ತಾಯಪೂರ್ವಕವಾಗಿ ಮತ್ತು ಬಲವಂತದ ಕ್ರಮಗಳ ಮೂಲಕ ಪಡೆಯದಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದ ಅವರು ಈ ಸಾಲಗಳ ಮರು ಪಾವತಿ ಅವಧಿಯನ್ನು ಸರ್ಕಾರದ ಮಾರ್ಗ ಸೂಚಿಯಂತೆ ವಿಸ್ತರಣೆ ಮಾಡಿರುವ ಕಾಲಮಿತಿಯಂತೆ ಕ್ರಮವಹಿಸುವಂತೆ ಹೇಳಿದರು.
ಬರಗಾಲದ ಕಾರಣದಿಂದ ಆರ್ಥಿಕ ತೊಂದರೆಗೊಳಗಾದ ರೈತರು ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರ ಸಾಲಕ್ಕೆ ಸಿಲುಕುವುದನ್ನು ತಡೆಯಲು ಬ್ಯಾಂಕುಗಳು ರೈತರಿಗೆ ಹೊಸ ಸಾಲಗಳನ್ನು ಆದ್ಯತೆಯ ಮೇಲೆ ಮಂಜೂರು ಮಾಡುವಂತೆ ತಿಳಿಸಿದ ಅವರು ಬರದ ಸಂದರ್ಭದಲ್ಲಿ ರೈತರ ನೆರವಿಗೆ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ನೆರವಿನ ಕ್ರಮಗಳ ಕುರಿತಂತೆ ರೈತರಿಗೆ ವ್ಯಾಪಕ ರೀತಿಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಎಲ್ಲಾ ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿನ ರೈತರಿಗೆ ಒದಗಿಸಿರುವ ಆರ್ಥಿಕ ನೆರವು ಕ್ರಮಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮತ್ತು ಈ ಕುರಿತು ಸೂಕ್ತ ದಾಖಲೆಗಳನ್ನು ಮುಂದಿನ ಸಭೆಯಲ್ಲಿ ಪ್ರಸ್ತುತ ಪಡಿಸುವಂತೆ ಸೂಚಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಪ್ರಭು ಸಭೆಗೆ ಮಾಹಿತಿ ನೀಡಿ ಸೆಪ್ಟೆಂಬರ್ 10 ರಂದು ನಡೆದ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (Sಐಃಅ) ಸಭೆಯಲ್ಲಿ ಬರಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಚಿಗಳನ್ನು ಅನುಮೋದಿಸಲಾಗಿದ್ದು, ತೀವ್ರ ಬರಪೀಡಿತ ತಾಲ್ಲೂಕುಗಳಲ್ಲಿ ಕೃಷಿ ಸಾಲಗಳ ಪುನರ್ ರಚನೆಯನ್ನು 12 ತಿಂಗಳ ಮೊರಟೋರಿಯಂ ಅವಧಿ ಒಳಗೊಂಡಂತೆ ಒಟ್ಟು 60 ತಿಂಗಳ ಮರುಪಾವತಿ ಅವಧಿಗೆ ಹಾಗೂ ಮಧ್ಯಮ ಪ್ರಮಾಣದ ಬರಪೀಡಿತ ತಾಲ್ಲೂಕುಗಳಲ್ಲಿ 12 ತಿಂಗಳ ಮೊರಟೋರಿಯಂ ಅವಧಿ ಒಳಗೊಂಡಂತೆ 36 ತಿಂಗಳ ಮರುಪಾವತಿ ಅವಧಿಗೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಅಕ್ಟೋಬರ್ 28 ರಿಂದ ಡಿಸೆಂಬರ್ 31 ರವರೆಗೆ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ನಡೆಯುತ್ತಿರುವ ಮೂರು ತಿಂಗಳ ಸ್ಯಾಚುರೇಶನ್ ಅಭಿಯಾನದ ಪ್ರಗತಿಯನ್ನೂ ಪರಿಶೀಲಿಸಲಾಯಿತು. ಜಿಲ್ಲೆಯ 226 ಗ್ರಾಮ ಪಂಚಾಯಿತಿಗಳನ್ನು ಅಭಿಯಾನದಲ್ಲಿ ಒಳಗೊಂಡಿದ್ದು, ಈಗಾಗಲೇ ಶಿಬಿರಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಹಯೋಗದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದುವರೆಗೆ 61 ಶಿಬಿರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಅಭಿಯಾನದಡಿ ಇನ್ನೂ 3.24 ಲಕ್ಷ ಜನರು Pಒಎಎಃಙ ಹಾಗೂ 1.93 ಲಕ್ಷ ಜನರು PಒSಃಙ ವ್ಯಾಪ್ತಿಗೆ ಒಳಪಡಬೇಕಿರುವುದು ಕಂಡುಬಂದಿದ್ದು, ಅರ್ಹರಾಗಿರುವ ಎಲ್ಲರನ್ನೂ ಈ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ತರಲು ಗರಿಷ್ಠ ಪ್ರಯತ್ನ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಯಾಚುರೇಶನ್ ಕ್ಯಾಂಪ್ನ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಸಭೆಯಲ್ಲಿ ಜಿ.ಪಂ. ಕಾರ್ಯದರ್ಶಿ ಸುಜಾತ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು


