November 19, 2026
;
suddi-3 (1)

 

 

ಅಂಬಳೆ ಕೈಗಾರಿಕಾ ಪ್ರದೇಶದಲ್ಲಿನ ಮಾಲಿನ್ಯ ಹಾಗೂ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ಅಂಬಳೆ ಕೈಗಾರಿಕಾ ಪ್ರದೇಶದಿಂದ ಜನವಸತಿ ಪ್ರದೇಶಗಳಿಗೆ ಉಂಟಾಗುತ್ತಿರುವ ತೊಂದರೆ ಕುರಿತು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಬಳೆ ಕೈಗಾರಿಕಾ ಪ್ರದೇಶದ ಕೆಐಎಡಿಬಿಯ ರಸ್ತೆಗಳಿಂದ ರೈತರ ಖಾಸಗಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕೈಗಾರಿಕಾ  ಪ್ರದೇಶದ ರಸ್ತೆಗಳನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ಗಡಿಯ ಭಾಗಕ್ಕೆ ಅಭಿವೃದ್ಧಿ ಪಡಿಸಿ ರಸ್ತೆಗಳನ್ನು ನಿರ್ಮಿಸಲಾಗಿದ್ದು ಪ್ರಸ್ತುತ ಸ್ಥಳೀಯರು ಕೈಗಾರಿಕಾ ಪ್ರದೇಶದ ರಸ್ತೆ ಸಂಖ್ಯೆ: 09 ರಿಂದ ಖಾಸಗಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸುವಂತೆ ಕೋರಿದ್ದಾರೆ ಅದರಂತೆ, ಮಂಡಳಿಯಿಂದ ಈಗಾಗಲೇ ಭೂಸ್ವಾಧೀನಪಡಿಸಿಕೊಂಡಿರುವ ಗಡಿಯ ಜಾಗದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಖಾಸಗಿ ಜಾಗದಲ್ಲಿ ಈ ರಸ್ತೆಯನ್ನು ವಿಸ್ತರಿಸಲು ಖಾಸಗಿ ಜಾಗವನ್ನು ಭೂಸ್ವಾಧೀನಪಡಿಸಿ ರಸ್ತೆಯನ್ನು ವಿಸ್ತರಿಸಿ ನಿರ್ಮಾಣ ಮಾಡಬೇಕಾಗಿರುತ್ತದೆ. ಹಾಗೂ ರಸ್ತೆ ಸಂಖ್ಯೆ: 07ಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಡಳಿಯಿಂದ 40’ಅಡಿ ಅಗಲದ ಜಾಗವನ್ನು ರಸ್ತೆಗಾಗಿ ಕಾಯ್ದಿರಿಸಲಾಗಿರುತ್ತದೆ. ಜಂಟಿ ಸರ್ವೆ ಕಾರ್ಯ ಕೈಗೊಂಡು, ರಸ್ತೆಯ ಗಡಿ ಗುರುತಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಇಲಾಖೆ ವತಿಯಿಂದ ಕ್ರಮವಹಿಸಲಾಗುವುದು ಎಂದರು.

ಈಗಾಗಲೇ ಕೈಗಾರಿಕ ಪ್ರದೇಶದಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ  ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ  ಮಂಡಳಿ ಸದಸ್ಯ ಕಾರ್ಯದರ್ಶಿಯವರಿಗೆ ಉನ್ನತ ಅಧಿಕಾರಿಗಳ ಪರಿಶೀಲನಾ ತಂಡ ನಿಯೋಜಿಸಲು ಪರಿಸರ ಅಧಿಕಾರಿಗಳು ಮನವಿ ಮಾಡಿದ್ದಾರೆ. ರುಷಿಲ್ ಡೆಕೋರ್ ಇಂಡಸ್ಟ್ರೀಸ್ ಲಿಮಿಟೆಡ್ ರವರಿಗೆ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಲಾಗಿದ್ದು ಈಗಾಗಲೇ ಅವರಿಗೆ ನೋಟಿಸ್ ಜಾರಿಮಾಡಲಾಗಿದೆಯಲ್ಲದೇ ಹಾಗೂ ಮತ್ತೊಮ್ಮೆ 33 ಕೈಗಾರಿಕಾ ಘಟಕಗಳಿಗೆ ನವೆಂಬರ್ 17 ರಂದು ನಿವೇಶನದಲ್ಲಿ ಮಾಲಿನ್ಯಕ್ಕೆ ಸಂಬಂಧಪಟ್ಟ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಪರಿವೀಕ್ಷಣೆ ಸಮಯದಲ್ಲಿ ರುಷಿಲ್ ಡೆಕೋರ್ ರವರು ಘಟಕದ ಹಿಂಭಾಗದಲ್ಲಿ ಅಳವಡಿಸಿರುವ ಪೈಪ್ ಲೈನ್‍ನ್ನು ಜರೂರು ತೆರವುಗೊಳಿಸಲು ಹಾಗೂ ಅಂಬಿಕಾ ಟಿಂಬರ್ಸ್ ಕಾರ್ಪೋರೇಷನ್ ರವರು ಕಾರ್ಮಿಕರಿಗೆ ನೀಡಿರುವ ವಸತಿಯಿಂದ ತ್ಯಾಜ್ಯ ನೀರು ಒಳಚರಂಡಿಯಿಂದ ಹರಿಯುತ್ತಿರುವುದನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಂಬಳೆ ಮತ್ತು ಗೌಡನಹಳ್ಳಿ ಗ್ರಾಮದ ವಸತಿ ಉದ್ದೇಶಕ್ಕಾಗಿ ನಿವೇಶನಗಳ ಹಂಚಿಕೆಗಾಗಿ ಒಟ್ಟು 9.00 ಎಕರೆ ಪ್ರದೇಶವನ್ನು ಗುರುತಿಸಿದ್ದು, ಇದರಲ್ಲಿ ನಿವೇಶನಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಂಚಿಕೆ ಮಾಡಿ 55 ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಅಂಬಳೆ ಮತ್ತು ಗೌಡನಹಳ್ಳಿ ಗ್ರಾಮದ ವಸತಿ ಉದ್ದೇಶಕ್ಕಾಗಿ 9.00 ಎಕರೆ ನಿವೇಶನವು ಹಂಚಿಕೆಯಾಗಿದ್ದು, ಇದಕ್ಕೆ ಹೊಂದಿಕೊಂಡಂತೆ ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ: 24 ರಿಂದ 27 ರವರೆಗೆ ಅಭಿವೃದ್ಧಿ ಪಡಿಸಿದ್ದು, ಈ ನಿವೇಶನವನ್ನು ಮೆ|| ಚಾಮುಂಡೇಶ್ವರಿ ರವರಿಗೆ ಹಂಚಿಕೆ ಮಾಡಲಾಗಿದೆ. ಉದ್ದಿಮೆದಾರರು ಮಾನ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಪ್ರಕರಣ ದಾಖಲಿಸಿರುತ್ತಾರೆ. ಪ್ರಸ್ತುತ ಸದರಿಯವರು ಹಂಚಿಕೆ ಕಡತವು ಕೆಐಎಡಿಬಿ ಕೇಂದ್ರ ಕಛೇರಿಯ ಹಂಚಿಕೆ ಪ್ರಗತಿಯಲ್ಲಿರುತ್ತದೆ ಹಾಗೂ ಗ್ರಾಮದ ಸ್ಥಳೀಯರು ಈ ನಿವೇಶನವನ್ನು ಒತ್ತುವರಿ ಮಾಡಿ ಗ್ರಾಮ ಪಂಚಾಯಿತಿ ವತಿಯಿಂದ ಇ-ಸ್ವತ್ತು ಪಡೆದು ನಿರ್ಮಿಸಿಕೊಂಡು ಅನಧಿಕೃತವಾಗಿ ವಾಸವಾಗಿರುತ್ತಾರೆ. ಈ ಸಂಬಂಧ, ಗ್ರಾಮ ಪಂಚಾಯಿತಿ ವತಿಯಿಂದ 9.00 ಎಕರೆ ಆಶ್ರಯಾ ಯೋಜನೆಯ ಜಾಗದ ಸರ್ವೆ ಕಾರ್ಯಕೈಗೊಂಡು ಗಡಿ ಗುರುತಿಸಿದ ನಂತರ ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ 24 ರಿಂದ 27 ರ ಜಾಗದ ಗಡಿ ಗುರುತಿಸಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಗಳನ್ನು ತೆರವುಗೊಳಿಸಲು ಕೆಐಎಡಿಬಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಜಂಟಿಯಾಗಿ ಸರ್ವೇ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಲಕ್ಷ್ಮಣಗೌಡ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು

ಅಂಬಳೆ ಕೈಗಾರಿಕಾ ಪ್ರದೇಶದಲ್ಲಿನ ಊರ ಮುಂದಿನ ಕೆರೆಗೆ ಚರಂಡಿ ನೀರು ಸೇರ್ಪಡೆಯಾಗಿ ಕಲುಷಿತವಾಗುತ್ತಿದ್ದು, ಇದರಿಂದ ಹಲವಾರು ತೊಂದರೆಗಳು ಉಂಟಾಗುತ್ತಿರುವ ಬಗ್ಗೆ, ಹಾಗೂ ಕೆರೆಯನ್ನು ಸ್ವಚ್ಛಗೊಳಿಸುವಕುರಿತಂತೆ ವಿ.ಬಿ,ಜಿ. ರಾಮ್ ಜಿ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಅನುದಾನವನ್ನು ಮೀಸಲಿರಿಸಿದ್ದು ಕೆರೆ ಸ್ವಚ್ಛತಾ ಕಾರ್ಯವನ್ನು 2 ತಿಂಗಳೊಳಗಾಗಿ ಮಾಡಲಾಗುವುದು ಹಾಗೂ ಗೌಡನಹಳ್ಳಿ ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರಿಗೆ ಸಂಬಂಧಿಸಿದಂತೆ 6 ತಿಂಗಳೊಳಗಾಗಿ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವನೆ ಪಡೆದು ಕ್ರಮ ವಹಿಸುವಂತೆ ತಾಲ್ಲೂಕು ಪಂಚಾಯಿತಿ  ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರವಿಪ್ರಸಾದ್, ಜಿಲ್ಲಾ ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಸುರೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.

 

 

Leave a Reply

Your email address will not be published. Required fields are marked *